ಸೌರಸಂಗೀತದಿಂದ ವಿದ್ಯುತ್ ಉತ್ಪಾದನೆ

ಸೌರಸಂಗೀತದಿಂದ ವಿದ್ಯುತ್ ಉತ್ಪಾದನೆ

ಬರಹ

ಅಗಣಿತ ತಾರಾಗಣಗಳ ನಡುವೆ ನಮ್ಮ ಸೂರ್ಯನೊ೦ದು ಸಾಧಾರಣವಾದ ನಕ್ಷತ್ರ. ಆದರೆ, ಭೂಮಿಯನ್ನು ಹೊರತುಪದಿಸಿದರೆ ಬಹುಶಃ ನಮಗೆ ಅತಿಮುಖ್ಯವಾದ ಮತ್ತೊಂದು ಆಕಾಶಕಾಯ ಸೂರ್ಯ. ಭುವಿಯ ಮೇಲಣ ಸಮಸ್ತ ಶಕ್ತಿಮೂಲಗಳು, ಹವಾಮಾನ, ಜೈವಿಕ ವ್ಯವಸ್ಥೆ ಹೀಗೆ ಎಲ್ಲಾ ವರ್ತಮಾನಗಳಿಗೂ, ನಮ್ಮ ಸೃಷ್ಥಿ, ಸ್ಥಿತಿ, ಲಯಗಳಿಗೂ ಕಾರಣಕರ್ತ ಈ ಸೂರ್ಯ. ಸಸ್ಯಗಳ ದ್ಯುತಿಸಂಶ್ಲೇಷಣೆಯ ಮೂಲಕ ಸಸ್ಯಾಹಾರಿ ಜೀವಿಗಳನ್ನು ನೇರವಾಗಿ ಹಾಗೂ ಮಾಂಸಾಹಾರಿ ಜೀವಿಗಳನ್ನು ಪರೋಕ್ಷವಾಗಿ ಸಂಪೋಷಿಸುತ್ತಿರುವುದು ಇದೇ ನಮ್ಮ ಸೂರ್ಯ.

ಸೂರ್ಯನೊಂದು ಅಗಾಧ ಗಾತ್ರದ ಅನಿಲಗೋಳ. ಸೂರ್ಯನನ್ನು ಒಂದು ಬೃಹತ್ ಚೆಂಡು ಎಂದು ಭಾವಿಸಿದರೆ ನಮ್ಮ ಭೂಮಿಯಂತಹ ಹತ್ತು ಲಕ್ಷ ಆಕೃತಿಗಳನ್ನು ಪುಡಿ ಮಾಡಿ ಅದರಲ್ಲಿ ತುಂಬಿಸಬಹುದು. ಆದರೆ ಸೂರ್ಯನು ಖಾಲಿ ಚೆಂಡಲ್ಲ.ಅದೊಂದು ಅಗಾಧ ತಾಪಮಾನ,ಒತ್ತಡ ಮತ್ತು ಸಾಂದ್ರತೆಯ ಅನಿಲಗಳ ಮುದ್ದೆ. ಅಲ್ಲಿರುವ ಮುಖ್ಯ ಅನಿಲಗಳು ಜಲಜನಕ ಮತ್ತು ಹೀಲಿಯಂ.

ಸೂರ್ಯನಲ್ಲೂ ಈರುಳ್ಳಿಯಂತೆ ಹಲವಾರು ಪದರಗಳಿವೆ. ಸೂರ್ಯನ ಕೇಂದ್ರಭಾಗ ಅಣುಸಮ್ಮಿಲನ ಕ್ರಿಯೆಯ ಭಯಾನಕ ಕುಲುಮೆ.. ಇಲ್ಲಿನ ಊಹಿಸಲಸಾಧ್ಯವಾದ ಶಾಖ(೧೫ ಮಿಯನ್ ಕೆಲ್ವಿನ್) ಮತ್ತು ಒತ್ತಡ(ಭೂಮಿಯ ೩೦೦ ಬಿಲಿಯನ್ ಪಟ್ಟು)ದಲ್ಲಿ ಜಲಜನಕದ ಪರಮಾಣುಗಳು ಸಮ್ಮಿಳನಗೊಂಡು ಹೀಲಿಯಂ ಉತ್ಪಾದನೆಯಾಗುತ್ತದೆ. ಈ ಸಮಯದಲ್ಲಿ ಅಗಾಧ ಶಕ್ತಿಯ ಗಾಮ ಬೆಳಕಿನ ಕಿರಣಗಳು ಬಿಡುಗಡೆಯಾಗುತ್ತವೆ. ಆದರೆ ಅಲ್ಲಿನ ಒತ್ತಡದಿಂದಾಗಿ ಈ ಗಾಮ ಕಿರಣಗಳು ಅಲ್ಲಿನ ಕಣಗಳಿಗೆ ಡಿಕ್ಕ್ಕಿ ಹೊಡೆಯುತ್ತಾ ಸೂರ್ಯನ ಮೇಲ್ಭಾಗ ತಲುಪಲು ಹತ್ತು ಲಕ್ಷ ವರ್ಷಗಳೇ ಬೇಕು. ಈ ಅವಧಿಯಲ್ಲಿ ಅದು ತನ್ನ ಶಕ್ತಿಯನ್ನು ಕಳೆದುಕೊಂಡು ಸಾಧಾರಣ ಬೆಳಕಿನ ಕಿರಣಗಳಾಗಿ ನಮ್ಮ ಭೂಮಿಯನ್ನು ತಲುಪುತ್ತದೆ.

ಸೂರ್ಯನ ಮಧ್ಯಭಾಗ ಒಲೆಯ ಮೇಲಿನ ಪಾತ್ರೆಯಂತೆ. ಕೇಂದ್ರದಿಂದ ಬಿಡುಗಡೆಯಾಗುವ ಅಗಾಧ ಶಾಖವನ್ನು ನಿಧಾನವಾಗಿ ಮೇಲ್ಭಾಗಕ್ಕೆ ವರ್ಗಾಯಿಸುತ್ತದೆ.

ಭೂಮಿದಿಂ:ದ ಪ್ರಖರವಾದ ತಟ್ಟೆಯಂತೆ ಕೋರೈಸುವುದೇ ಸೂರ್ಯನ ಹೊರಭಾಗ. ಬರಿಗಣ್ಣಿಗೆ ಬೇರೇನೂ ಕಾಣದಿದ್ದರೂ, ದೂರದರ್ಶಕಗಳು ಸೂರ್ಯನ ಮೇಲ್ಭಾಗದ ಹಲವಾರು ಲಕ್ಷಣಗಳನ್ನು ಗಮನಿಸಿವೆ. ನಿಯಮಿತವಾಗಿ ಕಾಣಿಸಿಕೊಳ್ಳುವ, ಉಷ್ಣಾಂಶ ಕಡಿಮೆಯಿರುವ ಕಪ್ಪು ಮಚ್ಚೆಗಳು(ssolar spots) ಸೂರ್ಯನ ಮೇಲಿವೆ. ಸೂರ್ಯನ ಮೇಲಿನಿಂದ ಕುಣಿಕೆಗಳಂತೆ ಹಾರಿಬೀಳುವ ಬೆಳಕಿನ ಹಗ್ಗಗಳು ಸೂರ್ಯನಲ್ಲಿವೆ. ಒಮ್ಮೊಮ್ಮೆ ಬೃಹದಾಕಾರವಾದ, ಇಂತಹ ಕುಣಿಕೆಗಳು ಹಲವಾರು ಭೂಮಿಗಳಷ್ಟು ಎತ್ತರಕ್ಕೆ ಜಿಗಿದು solar prominescence ಗಳೆನಿಸಿಕೊಳ್ಳುತ್ತವೆ. ಬರಿಗಣ್ಣಿಗೆ ಕಾಣದ ಪ್ರಭಾವಳಿಯೊಂದು ಸೂರ್ಯನ ಮೇಲ್ಬಾಗದ ಅಂಚಿನಲ್ಲಿದೆ. ವಿಚಿತ್ರವೆಂದರೆ ಸೂರ್ಯನ ಮೇಲ್ಭಾಗದ ಉಷ್ಣತೆ ಆರು ಸಾವಿರ ಡಿಗ್ರಿಗಳಿದ್ದರೆ ಈ ಪ್ರಭಾವಳಿಯ ಉಷ್ಣತೆ ಹಲವಾರು ಮಿಲಿಯನ್ ಡಿಗ್ರಿಗಳು. ಒಮ್ಮೊಮ್ಮೆ ಈ ಪ್ರಭಾವಳಿಗಳಲ್ಲಿ ಸ್ಫ್ತೋಟ ಸಂಭವಿಸಿ, ಲಕ್ಷಾಂತರ ಟನ್ ಶಕ್ತಿಶಾಲಿ ವಿಕಿರಣಗಳು ಬುಲೆಟ್ ಗಳಂತೆ ಚಲಿಸಿ ಭೂಮಿಯ ಮೇಲಿನ ಸಂಪರ್ಕ ಜಾಲಗಳನ್ನೆಲ್ಲಾ ಸ್ತಬ್ಧಗೊಳಿಸುತ್ತದೆ.

ಸೂರ್ಯನ ಮೇಲಿನ ಈ ಎಲ್ಲಾ ವಿಚಿತ್ರ ವಿದ್ಯಮಾನಗಳಿಗೂ ಅಲ್ಲಿನ ವಿದ್ಯುತ್ ಕಾಂತೀಯ ಅಲೆಗಳೇ ಕಾರಣ. ಈ ವಿದ್ಯುತ್ ಕಾಂತೀಯ ಅಲೆಗಳು ಪ್ರವಹಿಸಲು ಸೂರ್ಯನಲ್ಲಿ ಅಪಾರ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿರಬೇಕು. ಈ ಪರಿ ವಿದ್ಯುತ್ ಉತ್ಪಾದನೆಯಾಗಲು ಸೂರ್ಯನೂ ಕೂಡ ನಮ್ಮ ಶರಾವತಿಯಲ್ಲಿ ವಿದ್ಯುತ್ ಉತ್ಪಾದಿಸುವ ಡೈನಮೋಗಳಂತೆ ಬೃಹತ್ ಗಾತ್ರದ ಡೈನಮೋ ಇರಬಹುದೇ?. ಇದನ್ನು ತಿಳಿಯುವುದಾದರೂ ಹೇಗೆ?.

ಸೂರ್ಯನ ಕುರಿತು ನಮಗೆ ನೇರವಾಗಿ ತಿಳಿದುಬರುವುದು ಅವನ ಮೇಲಿನಿಂದ ಹೊರಬರುವ ಬೆಳಕಿನ ಕಿರಣಗಳ ಅಧ್ಯಯನದಿಂದ. ಈ ಕಿರಣಗಳು ಅವನ ಆಂತರ್ಯದಲ್ಲಿ ನಡೆಯುತ್ತಿರುವ ಕೋಲಾಹಲಗಳನ್ನು ತಿಳಿಸಲಾರವು. ಸೂರ್ಯನ ಆಂತರ್ಯದ ವರ್ತಮಾನಗಳನ್ನು ತಿಳಿಸುವುದು ಸೂರ್ಯಕಂಪನಶಾಸ್ತ್ರ(Helioseismology) ಎಂಬ ಜ್ಞಾನಶಾಖೆ.

ಭೂಮಿಯ ಮೇಲೆ ಸಂಭವಿಸುವ ಭಯಾನಕ ಭೂಕಂಪಗಳು ನಮಗೆ ಗೊತ್ತು. ಆದರೆ ನಮ್ಮ ಅರಿವಿಗೆ ಬಾರದ ಸೂಕ್ಷ್ಮರೀತಿಯಲ್ಲಿ ಭೂಮಿ ಕಂಪಿಸುತ್ತಿರುತ್ತದೆ. ಈ ಕಂಪನದ ಅಧ್ಯಯನದಿಂದ ಭೂಮಿಯೊಳಗೆ ನಡೆಯುತ್ತಿರುವ ಸಂಗತಿಗಳನು ಅರಿಯುವ ವಿಜ್ಞಾನ 'ಕಂಪನಶಾಸ್ತ್ರ'(seismology). ಇದೇ ವಿಜ್ಞಾನವನ್ನು ಸೂರ್ಯನಿಗೂ ಅನ್ವಯಿಸಿ ಅಲ್ಲಿನ ಆಂತರ್ಯದ ತಳಮಳಗಳನ್ನೂ, ನಿಗೂಢಗಳನ್ನೂ ತಿಳಿಯುವ ಜ್ಞಾನಶಾಖೆ ಸೌರಕಂಪನಶಾಸ್ತ್ರ(helioseismology). ಸೂರ್ಯನ ಮೇಲ್ಭಾಗ ನೀರಿನ ಅಲೆ ಪ್ರವಹಿಸುವಂತೆ ನಿರಂತರವಾಗಿ ಬದಲಾಗುತ್ತಿರುತ್ತದೆ. ಈ ಅಲೆಗಳಂತಹ ಕಂಪನಗಳು ಉಂಟಾಗುವುದು ಧ್ವನಿತರಂಗಗಳಿಂದ. ಸೂರ್ಯನೊಳಗಿನ ಪ್ರಕ್ಷುಬ್ಧ ವಾತಾವರಣ ಕ್ಷಣಕ್ಷಣವೂ ಲಕ್ಷಾಂತರ ಧ್ವನಿತರಂಗಗಳನ್ನು ಸೃಷ್ಠಿಸುತ್ತದೆ. ಈ ತರಂಗಗಳ ತಾಕಲಾಟಗಳ ಒಟ್ಟಾರೆ ಫಲಿತಾಂಶವಾಗಿ ಸೂರ್ಯನ ಮೇಲ್ಭಾಗ ಕಂಪಿಸುತ್ತದೆ. ಈ ಧ್ವನಿತರಂಗಗಳು ಬೆಳಕಿನ 'ಫೋಟಾನ್'ಕಿರಣಗಳಂತಲ್ಲ. ಫೋಟಾನ್ ಕಿರಣಗಳು ಸೂರ್ಯನೊಳಗಿನ ಕಣಗಳ ಜತೆ ಡಿಕ್ಕಿ ಹೊಡೆಯುತ್ತಾ ಹೊರಬರಲು ಕ್ಷಾಂತರ ವರ್ಷಗಳೇ ಬೇಕು. ಆದರೆ ಧ್ವನಿತರಂಗಗಳು(ಮತ್ತು ಮತ್ತೊಂದು ಕಣವಾದ ನ್ಯೂಟ್ರಿನೋ) ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಹೊರಬರುತ್ತವೆ. ಸೂರ್ಯ-ಭೂಮಿ ನಡುವೆ ನಿರ್ವಾತ ಸ್ಠಿತಿಯಿರುವುದರಿಂದ ಈ ಧ್ವನಿತರಂಗಗಳನ್ನೂ, ಸೌರಸಂಗೀತವನ್ನೂ ನಾವು ಕೇಳಲಾರೆವು. ಆದರೆ 'ಸೌರ ಸಂಗೀತ' ಹೇಗಿರಬಹುದು?. ಅಗಾಧ ಗಾತ್ರದ ಸೋರೆಬುರುಡೆಯೊಂದು ಮರುಭೂಮಿಯ ಬಿರುಗಾಳಿಗೆ ಸಿಕ್ಕಿದೆ ಎಂದುಕೊಳ್ಳಿ. ಅಲ್ಲಿನ ಕೋಟ್ಯಾಂತರ ಮರಳಿನ ಕಣಗಳು ದಶದಿಕ್ಕುಗಳಿಂದ ಸೋರೆಬುರುಡೆಗೆ ಬಾರಿಸುವಾಗ ಅದು ಹೊರಡಿಸುವ ಠೇಂಕಾರದಂತೆ ಸೌರಸಂಗೀತವೂ ಇರಬಹುದು ಎಂದು ಜ್ಞಾನಿಗಳ ಊಹೆ. ಈ ಧ್ವನಿತರಂಗಗಳು ಸೂರ್ಯನ ಅಂತರಂಗದಿಂದ ನೇರವಾಗಿ ಹೊರಬರುವುದರಿಂದ ಇವುಗಳ ಅಧ್ಯಯನzಂದ ಸೂರ್ಯನೊಳಗೆ ನಡೆಯುತ್ತಿರುವ ವಿದ್ಯಮಾನಗಳು ತಿಳಿಯುತ್ತವೆ. ನುರಿತ ವೈದ್ಯನೊಬ್ಬ ರೋಗಿಯ ನಾಡಿಬಡಿತವನ್ನು ಪರೀಕ್ಷಿಸಿ ಅವನ ಹೃದಯದ ಸ್ಠಿತಿಯನ್ನು ತಿಳಿಸುವಂತೆ ಸೂರ್ಯನ ಧ್ವನಿತರಂಗಗಳಿಂದ ಸೂರ್ಯನೊಳಗಿನ ಶಯಗಳನ್ನು ವಿಜ್ಞಾನಿಗಳು ತಿಳಿದಿದ್ದಾರೆ.

ಸೂರ್ಯನ ಧ್ವನಿಯನ್ನು ನಿರ್ವಾತ ಸ್ಥಿತಿಯಿಂದಾಗಿ ನಾವು ಕೇಳಲಾರೆವು. ಆದರೆ ಧ್ವನಿತರಂಗಗಳಿಂದ ಉಂಟಾದ ಕಂಪನದ ಅಲೆಗಳನ್ನು ಗಮನಿಸಬದುದಲ್ಲವೇ? ಈ ಕಂಪನದ ಅಲೆಗಳನ್ನು ಅಧ್ಯಯನ ಮಾಡಿ ಅವುಗಳ ಸೃಷ್ಠಿಗೆ ಕಾರಣವಾದ ಧ್ವನಿತರಂಗಗಳ ಮಾಹಿತಿಗಳನ್ನು ಕಲೆಹಾಕಬಹುದು. ಈ ರೀತಿಯ ಅಧ್ಯಯನದಿಂದ ಸೂರ್ಯನ ಬಗೆಗಿನ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ.

ಭೂಮಿಯಂತೆ ಸೂರ್ಯನೂ ತನ್ನ ಅಕ್ಷದ ಸುತ್ತಲೂ ತಿರುಗುತ್ತದೆ. ಆದರೆ ಸೂರ್ಯ ಭೂಮಿಯಂತೆ ಚೆಂದಿನ ರೀತಿಯಲ್ಲಿ ಸುತ್ತುವುದಿಲ್ಲ. ಸೂರ್ಯನ ಮೇಲ್ಭಾಗ ಹಲವಾರು ಬೆಲ್ಟ್(belt)ಗಳನ್ನು ಜೋಡಿಸಿದಂತಿದೆ. ಈ ಬೆಲ್ಟಗಳು ಬೇರೆಬೇರೆ ವೇಗದಲ್ಲಿ ತಿರುಗುತ್ತವೆ. ನಡುವಣ ಭಾಗ ವೇಗವಾಗಿ ಅಂದರೆ ೨೬ ದಿನಗಳಿಗೊಮ್ಮೆ ಸುತ್ತಿದರೆ , ಧ್ರುವಪ್ರದೇಶಗಳಲ್ಲಿ ಈ ಅವಧಿ ೩೬ ದಿನಗಳು. ಮತ್ತೊಂದು ವಿಚಿತ್ರವೆಂದರೆ ಸೂರ್ಯನ ಒಳಗಿನ ಭಾಗ ಭೂಮಿಯಂತೆಯೇ ಚೆಂಡಿನಂತೆ ೨೭ ದಿನಗಳಿಗೊಮ್ಮೆ ತಿರುಗುತ್ತದೆ. ಅಂದರೆ ಸೂರ್ಯನ ಒಳಭಾಗಗಳು ಹೊರಭಾಗದ ಧ್ರುವಪ್ರದೇಶಗಳಿಗಿಂತ ವೇಗವಾಗಿ ಮತ್ತು ಹೊರಭಾಗದ ಸಮಭಾಜಕ ವಲಯಕ್ಕಿಂತ ಸ್ವಲ್ಪ ನಿಧಾನವಾಗಿ ಸುತ್ತುತ್ತಿದೆ. ಹೊರಭಾಗ ಮತ್ತು ಒಳಭಾಗಗಳ ತಿರುಗುವಿಕೆಯಲ್ಲಿನ ವ್ಯತ್ಯಾಸದ ಅಂತರದಿಂದಾಗಿ ಸೂರ್ಯನು ದೈತ್ಯಾಕಾರದ ಡೈನಮೋದಂತೆ ವರ್ತಿಸಿ ಅಪಾರಪ್ರಮಾಣದ ವಿದ್ಯುತ್ ಹೊರಹಾಕುತ್ತಾನೆ.

ಈ ವಿದ್ಯುತ್ ನಿಂದ ವಿದ್ಯುತ್ ಕಾಂತೀಯ ಅಲೆಗಳು ಸೃಷ್ಟಿಯಾಗುತ್ತವೆ. ಈ ಅಲೆಗಳು ಶಕ್ತಿಯನ್ನು ಮೈಗೂಡಿಸಿಗೊಳ್ಳುತ್ತ ರಬ್ಬರ್ ಬ್ಯಾಂಡ್ ನಂತೆ ಹಿಗ್ಗುತ್ತವೆ. ಇವೇ ನಮಗೆ ಗೋಚರಿಸುವ ಬೆಳಕಿನ ಹಗ್ಗಗಳು(solar flares). ಕೆಲವೊಮ್ಮೆ ಇವೇ ದೈತ್ಯಾಕಾರ ತಾಳಿ solar prominescence ಗಳಾಗುತ್ತವೆ. ಒಟ್ಟಿನಲ್ಲಿ ಈ ವಿದ್ಯುತ್ ಕಾಂತೀಯ ಶಕ್ತಿಯೇ ಸೂರ್ಯನ ಎಲ್ಲಾ ವಿಚಿತ್ರವಾದ ಮೇಲ್ಮೈಲಕ್ಷಣಗಳಿಗೂ ಕಾರಣವಾಗಿವೆ.