ಸೌರ ಶಕ್ತಿಯನ್ನು ದ್ರವರೂಪದಲ್ಲಿ ಸಂಗ್ರಹಿಸಿಡಬಹುದೇ?

ಜಗತ್ತಿನ ಪ್ರತಿಷ್ಠಿತ ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ಪ್ರಯೋಗಶಾಲೆಗಳಲ್ಲಿ ವಿಜ್ಞಾನಿಗಳು ಪ್ರತಿನಿತ್ಯ ಒಂದಿಲ್ಲ ಒಂದು ಸಂಶೋಧನಾತ್ಮಕ ಅಧ್ಯಯನದಲ್ಲಿ ತೊಡಗೇ ಇರುತ್ತಾರೆ. ಹಾಗೆ ಸ್ವೀಡನ್ನ ಚಾಲ್ಮರ್ಸ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಸಂಶೋಧಕರು ಸೌರ ಶಕ್ತಿಯನ್ನು ದ್ರವ ರೂಪದಲ್ಲಿ ಸಂಗ್ರಹಿಸುವ ಮತ್ತು ಈಗ ಅದರಿಂದ ವಿದ್ಯುತ್ ಉತ್ಪಾದಿಸುವ ನವೀನ ಶಕ್ತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಆಣ್ವಿಕ ಸೌರ ಥರ್ಮಲ್ (ಎಮ್ ಒ ಎಸ್ ಟಿ) ವ್ಯವಸ್ಥೆ ಎಂದು ಕರೆಯಲ್ಪಡುವ ಈ ವ್ಯವಸ್ಥೆಯು ಒಂದು ದಶಕದಿಂದ ಅಭಿವೃದ್ಧಿಯಲ್ಲಿದೆ; ಇಂಗಾಲ, ಹೈಡೋಜನ್ ಮತ್ತು ಸಾರಜನಕದಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಣುವನ್ನು ಇದು ಬಳಸುತ್ತದೆ.
ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ, ಅಣುವು ಅದರ ಆಕಾರವನ್ನು ಬದಲಾಯಿಸುತ್ತದೆ, ಶಕ್ತಿ-ಸಮೃದ್ಧ ಐಸೋಮರ್ ಆಗಿ ರೂಪಾಂತರಗೊಳ್ಳುತ್ತದೆ. ಇದನ್ನು 18 ವರ್ಷಗಳವರೆಗೆ ದ್ರವ ರೂಪದಲ್ಲಿ ಸಂಗ್ರಹಿಸಬಹುದು ಎನ್ನುತ್ತಾರೆ ಸಂಶೋಧಕರು. ವೇಗವರ್ಧಕವು ಅಣುವನ್ನು ಅದರ ಮೂಲ ಸ್ಥಿತಿಗೆ ಹಿಂತಿರುಗಿಸಲು ಪ್ರಚೋದಿಸಿದಾಗ ಶಕ್ತಿಯು ಶಾಖದ ರೂಪದಲ್ಲಿ ಬಿಡುಗಡೆಯಾಗುತ್ತದೆ. ಇತ್ತೀಚಿನ ಪ್ರಗತಿಯು ಈ ಶಾಖವನ್ನು ವಿದ್ಯುತ್ ಆಗಿ ಪರಿವರ್ತಿಸಲು ಅವಕಾಶ ಮಾಡಿಕೊಟ್ಟಿದೆ.
ಚಾಲ್ಮರ್ಸ್ ತಂಡವು ಚೀನಾದ ಶಾಂಫೈ ಜಿಯಾವೊ ಟಾಂಗ್ ವಿಶ್ವವಿದ್ಯಾನಿಲಯದ ಸಂಶೋಧಕರೊಂದಿಗೆ ಸಹಕರಿಸಿ ಕಾಂಪ್ಯಾಕ್ಟ್ ಥರ್ಮೋಎಲೆಕ್ನಿಕ್ ಜನರೇಟರ್ ಅನ್ನು ರಚಿಸಿದೆ. ಅದು ಸಂಗ್ರಹಿಸಲಾದ ಸೌರ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಈ ವ್ಯವಸ್ಥೆಯು ಪ್ರಸ್ತುತ ಸಣ್ಣ ಪ್ರಮಾಣದ ವಿದ್ಯುತ್ ಅನ್ನು ಮಾತ್ರ ಉತ್ಪಾದಿಸುತ್ತಿದೆ. ಆದರೂ ಸಂಶೋಧಕರು ಅದರ ಸಾಮರ್ಥ್ಯದ ಬಗ್ಗೆ ಆಶಾವಾದಿಯಾಗಿದ್ದಾರೆ. ಸ್ಮಾರ್ಟ್ ವಾಚ್ಗಳು ಮತ್ತು ಹೆಡ್ಫೋನ್ಗಳಂತಹ ಎಲೆಕ್ಟ್ರಾನಿಕ್ಸ್ಗೆ ಸಂಯೋಜಿಸಬಹುದಾದ ಅಲ್ಪಾ-ಥಿನ್ ಜನರೇಟರ್, ಸೌರಶಕ್ತಿಯ ಮಧ್ಯಂತರ ಸ್ವಭಾವವನ್ನು ಮೀರಿಸಿ, ಬೇಡಿಕೆಯ ಮೇರೆಗೆ ಸೌರ ಶಕ್ತಿಯನ್ನು ಸಂಗ್ರಹಿಸಬಹುದು ಮತ್ತು ಬಳಸಬಹುದಾದ ಸ್ವಯಂ ಚಾರ್ಜಿಂಗ್ ಸಾಧನೆಗಳ ಕಡೆಗಿನ ಭರವಸೆಯ ಹೆಜ್ಜೆಯನ್ನು ಗುರುತಿಸುತ್ತದೆ.
ಎಮ್ ಒ ಎಸ್ ಟಿ ವ್ಯವಸ್ಥೆಯು ಸೌರ ಶಕ್ತಿಯ ಶೇಖರಣೆ ಮತ್ತು ಉತ್ಪಾದನೆಗೆ ಒಂದು ಅದ್ಭುತವಾದ ವಿಧಾನವನ್ನು ನೀಡುತ್ತದೆ. ಸಾಂಪ್ರದಾಯಿಕ ಸೌರ ಫಲಕಗಳಿಗಿಂತ ಭಿನ್ನವಾಗಿ, ಇದು ಹವಾಮಾನ, ದಿನದ ಸಮಯ ಅಥವಾ ಭೌಗೋಳಿಕ ಸ್ಥಳವನ್ನು ಲೆಕ್ಕಿಸದೆ ಮತ್ತು ಇಂಗಾಲದ ಡೈ ಆಕ್ಸೆಡ್ ಅನ್ನು ಹೊರಸೂಸದೆ ವಿದ್ಯುತ್ ಉತ್ಪಾದಿಸುತ್ತದೆ. ಸಂಶೋಧಕರು ಈಗ ವ್ಯವಸ್ಥೆಯ ದಕ್ಷತೆಯನ್ನು ಸುಧಾರಿಸಲು ಮತ್ತು ವಾಣಿಜ್ಯ ಬಳಕೆಗೆ ವೆಚ್ಚ- ಪರಿಣಾಮಕಾರಿಯಾಗಿಸುವದ ಗಮನಹರಿಸಿದ್ದಾರೆ. ಈ ತಂತ್ರಜ್ಞಾನವು ನಿರಂತರವಾಗಿ ಮತ್ತು ಸಮರ್ಥವಾಗಿ ಕಾರ್ಯನಿರ್ವಹಿಸುವ ಸೌರ-ಚಾಲಿತ ಗ್ಯಾಜೆಟ್ಗಳು ಮತ್ತು ಮನೆಯ ತಾಪಹ ವ್ಯವಸ್ಥೆಗಳಿಗೆ ದಾರಿ ಮಾಡಿಕೊಡುತ್ತದೆ.
-ಎಲ್ ಪಿ ಕುಲಕರ್ಣಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ