ಸ್ಕೂಪ್

ಸ್ಕೂಪ್

ಪುಸ್ತಕದ ಲೇಖಕ/ಕವಿಯ ಹೆಸರು
ಕುಲದೀಪ್ ನಯ್ಯರ್
ಪ್ರಕಾಶಕರು
ಪ್ರಜಾವಾಣಿ ಪ್ರಕಾಶನ, ನಂ೭೫, ಮಹಾತ್ಮಾ ಗಾಂಧಿ ರಸ್ತೆ, ಬೆಂಗಳೂರು-೫೬೦೦೦೧
ಪುಸ್ತಕದ ಬೆಲೆ
ರೂ.೭೫.೦೦ ಮುದ್ರಣ: ೨೦೦೬

ಭಾರತ ಖ್ಯಾತ ಪತ್ರಕರ್ತರಾದ ಕುಲದೀಪ್ ನಯ್ಯರ್ ಅವರು ಬರೆದ ‘ಸ್ಕೂಪ್' ದೇಶದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸಮಗ್ರವಾಗಿ ವಿಶ್ಲೇಷಿಸಿರುವ ಪುಸ್ತಕವೆಂದರೆ ತಪ್ಪಾಗಲಾರದು. ಕುಲದೀಪ್ ನಯ್ಯರ್ ಇವರ ಮೊದಲ ಕನ್ನಡಕ್ಕೆ ಭಾಷಾಂತರದೊಂಡ ಪುಸ್ತಕ ಇದು. ರಾಜಕೀಯ ವಿದ್ಯಮಾನಗಳ ಬೆನ್ನು ಹತ್ತಿದ ಅವರು ಆ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಮುಖ ಘಟನೆಗಳನ್ನು ಬೇರೆಲ್ಲರಿಗಿಂತ ಮೊದಲು ಗ್ರಹಿಸಿ ಬಹಿರಂಗಗೊಳಿಸಿದ ಕಥನವಿದು. ಮಹಾತ್ಮಾ ಗಾಂಧಿಯವರ ಹತ್ಯೆಯಿಂದ ಹಿಡಿದು ಮಾಜಿ ಪ್ರಧಾನಿ ವಾಜಪೇಯಿ ಲಾಹೋರಿಗೆ ಕೈಗೊಂಡ ಬಸ್ ಯಾತ್ರೆಯವರೆಗೆ ಸುಮಾರು ಅರ್ಧ ಶತಮಾನದ ನಮ್ಮ ಇತಿಹಾಸವೇ ಇಲ್ಲಿದೆ. ನೆಹರೂ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸಾವು, ರಾಷ್ಟ್ರ ಭಾಷೆಯ ವಿವಾದ, ತಾಷ್ಕೆಂಟ್ ಒಪ್ಪಂದ, ಕಾಂಗ್ರೆಸ್ ವಿಭಜನೆ, ಬಾಂಗ್ಲಾ ಉದಯ, ತುರ್ತು ಪರಿಸ್ಥಿತಿ ಇವೇ ಮೊದಲಾದ ಪ್ರಮುಖ ಘಟನೆಗಳು ಇಲ್ಲಿ ಬರಹದ ರೂಪ ಪಡೆದು ಕಣ್ಣಿಗೆ ಕಟ್ಟುವಂತೆ ವಿವರಿಸಲ್ಪಟ್ಟಿದೆ. ‘ಪ್ರಜಾವಾಣಿ' ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾದ ಕುಲದೀಪ ನಯ್ಯರ್ ಅವರ ವಸ್ತುನಿಷ್ಟ ಮನೋಧರ್ಮಕ್ಕೆ, ವಿಶ್ಲೇಷಣಾ ಪ್ರತಿಭೆಗೆ, ಒಳನೋಟಗಳಿಗೆ ಹಿಡಿದ ಕನ್ನಡಿಯಾಗಿದೆ.

ಲೇಖನಿ ಖಡ್ಗಕ್ಕಿಂತಲೂ ಹರಿತ ಎನ್ನುತ್ತಾರೆ. ಕುಲದೀಪ್ ನಯ್ಯರ್ ಅವರ ಬರಹಗಳ ಶೈಲಿ ಮತ್ತು ವಿವರಗಳನ್ನು ಗಮನಿಸಿದಾಗ ಅದು ನಿಜವೆಂದು ಭಾಸವಾಗುತ್ತದೆ. ಅವರೇ ಬರೆದಿರುವಂತೆ ನೆಹರೂ ಅವರ ನಿಧನಾ ನಂತರ ಪ್ರಧಾನಿ ಯಾರು ಆಗಬೇಕೆಂದು ಚರ್ಚೆಗಳು ನಡೆಯುತ್ತಿದ್ದುವು. ಅಂದಿನ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದವರು ಕೆ. ಕಾಮರಾಜ್. ಅಂದು ಪ್ರಧಾನಿಯ ರೇಸ್ ನಲ್ಲಿ ಇದ್ದವರು ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಮೊರಾರ್ಜಿ ದೇಸಾಯಿಯವರು. ಕಾಮರಾಜ್ ಅವರಿಗೆ ಶಾಸ್ತ್ರಿಗಳ ಮೇಲೆ ಒಲವಿತ್ತು. ಆದರೆ ಮೊರಾರ್ಜಿಯವರೂ ಪ್ರಭಾವಶಾಲಿಗಳಾಗಿದ್ದರು. ಆ ಸಮಯದಲ್ಲಿ ಕುಲದೀಪ್ ನಯ್ಯರ್ ಅವರು ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ ಇದರ ಮುಖ್ಯಸ್ಥರಾಗಿದ್ದರು. ಆ ಹುದ್ದೆಗೆ ಬರುವುದರ ಮೊದಲು ಶಾಸ್ತ್ರಿಯವರ ವಾರ್ತಾಧಿಕಾರಿಯಾಗಿದ್ದರು. ಹೀಗಾಗಿ ಪ್ರಧಾನಿ ರೇಸ್ ನಲ್ಲಿದ್ದ ಇಬ್ಬರೂ ವ್ಯಕ್ತಿಗಳನ್ನು ಭೇಟಿಯಾಗಿ ವರದಿ ಬರೆಯಬೇಕೆಂದು ನಯ್ಯರ್ ನಿರ್ಧರಿಸಿದ್ದರು. ಮೊರಾರ್ಜಿ ದೇಸಾಯಿಯವರ ಮನೆಗೆ ಹೋದಾಗ ಅವರ ಮಗ ಅಂದಿನ ಸಂಸದರನೇಕರ ಸಹಿ ಸಂಗ್ರಹ ಮಾಡಿಕೊಂಡಿದ್ದರು. ತಮ್ಮ ತಂದೆಯವರೇ ಪ್ರಧಾನಿಯಾಗಬೇಕೆಂದೂ, ಅದಕ್ಕಾಗಿ ಮತದಾನ ನಡೆದರೂ ತೊಂದರೆ ಇಲ್ಲ ಎಂದು ಹೇಳಿದರು. ಆದರೆ ಶಾಸ್ತ್ರಿಯವರು ಚುನಾವಣೆ ಇಲ್ಲದೇ ಒಮ್ಮತದ ಆಯ್ಕೆ ತಮ್ಮ ನಿಲುವು ಎಂದರು. ಇದನ್ನೇ ವರದಿ ಪ್ರಾರಂಭಿಸುವಾಗ ಕುಲದೀಪ್ ನಯ್ಯರ್ ಅವರು ‘ಮಾಜಿ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಪಕ್ಷದ ನಾಯಕ  ಸ್ಥಾನಕ್ಕೆ ನಾನೂ ಒಂದು ಕೈ ನೋಡಿಯೇ ಬಿಡುವೆ' ಎಂದು ಹೇಳಿದರು ಎಂದೇ ಬರೆದರು. ಇದು ರಾಜಕೀಯ ಪಡಶಾಲೆಯಲ್ಲಿ ಭಾರೀ ಸಂಚಲನವಾಯಿತು. ಸ್ವತಃ ಕಾಮರಾಜ್ ರವರೇ ನಯ್ಯರ್ ಅವರಿಗೆ ಧನ್ಯವಾದ ಎಂದು ಹೇಳಿದರು. ಈ ವರದಿ ಬರೆಯುವಾಗ ನಯ್ಯರ್ ಅವರು ಆ ಪದಗಳು ಇಷ್ಟು ರಾಜಕೀಯ ಬದಲಾವಣೆಗೆ ಕಾರಣವಾದೀತು ಎಂದು ಭಾವಿಸಿರಲಿಲ್ಲ. ಮುಂದೆ ಶಾಸ್ತ್ರಿಗಳು ಪ್ರಧಾನಿಯಾದರು. ಸಂಸದರೆಲ್ಲಾ ಶಾಸ್ತ್ರಿಯವರ ಮೇಲೇ ಒಲವು ತೋರಿಸಿದರು. ಮುಂದೆ ಆದದೆಲ್ಲಾ ಇತಿಹಾಸ. ಆದರೆ ಈ ವರದಿಯನ್ನು ಅಪಮಾನವೆಂದು ನಂಬಿದ ಮೊರಾರ್ಜಿ ದೇಸಾಯಿಯವರು ಕುಲದೀಪ್ ನಯ್ಯರ್ ಅವರನ್ನು ಕ್ಷಮಿಸಲೇ ಇಲ್ಲ. ೧೩ ವರ್ಷಗಳ ನಂತರ ಪ್ರಧಾನಿಯಾದ ಬಳಿಕವೂ ಮೊರಾರ್ಜಿಯವರು ಈ ಫಟನೆಯನ್ನು ಮರೆಯಲಿಲ್ಲ. ಇದು ಲೇಖನಿಯ ತಾಕತ್ತು.

ಇದೇ ರೀತಿಯ ನಾವು ತಿಳಿದಿರದ ‘ಸ್ಕೂಪ್' ಆದ ವರದಿ, ಲೇಖನಗಳು ಈ ಪುಸ್ತಕದಲ್ಲಿವೆ. ೨೮ ಮಾಹಿತಿಪೂರ್ಣ ಲೇಖನಗಳು ಈ ಪುಸ್ತಕದಲ್ಲಿದೆ. ಸುಮಾರು ೧೫೦ ಪುಟಗಳ ಈ ಪುಸ್ತಕ ಪ್ರಜಾವಾಣಿ ಪ್ರಕಾಶನದ ಪ್ರಥಮ ಕಾಣಿಕೆ.