ಸ್ಕ್ರೀನ್ ಅಡಿಕ್ಷನ್ ಮತ್ತು ಮಕ್ಕಳು
’ಸರ್ ನನ್ ಮಗ ನನ್ ಜೊತೆ ಮಾತೇ ಆಡಲ್ಲ ಸರ್, ಮೂರ್ಹೊತ್ತು ಟಿವಿ, ಇಲ್ಲಾಂದ್ರೆ ಮೊಬೈಲ್. ನಾವಿದೀವಿ ಅನ್ನೋ ಪ್ರಜ್ಞೇನೇ ಇಲ್ಲ ಇವನಿಗೆ’ ಕಂಪ್ಲೇಂಟುಗಳ ಪಟ್ಟಿ ದೊಡ್ಡದಿತ್ತು ಸಧ್ಯಕ್ಕೆ ಇಷ್ಟಕ್ಕೆ ನಿಲ್ಲಿಸೋಣ. ಏಳನೇ ಕ್ಲಾಸಿನಲ್ಲಿ ಓದ್ತಾ ಇದ್ದ ಮಗನನ್ನ ಕರೆದುಕೊಂಡು ಬಂದು, ಕಂಪ್ಲೇಂಟ್ ಹೇಳಿದರು. ಏನಿರಬಹುದು ಇದಕ್ಕೆ ಕಾರಣ? ಎಲ್ಲಿ ಎಡವುತ್ತಿದ್ದೇವೆ? ಇದಕ್ಕೆ ಕಾರಣಗಳು ಹಲವಾರು ಇವೆ. ತಂದೆ ತಾಯಿ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಏನು ಲೋಪಗಳಿವೆ. ಈ ಸಮಸ್ಯೆ ಹೇಳಿಕೊಂಡು ಬರುವ ಅನೇಕ ತಾಯ್ತಂದೆಯರು ಬ್ಯುಸಿ ಜನಗಳು ಮಾತ್ರ ಎಂದು ಭಾವಿಸಬೇಡಿ ಎಲ್ಲ ಸ್ಥರದ ತಾಯ್ತಂದೆಯರಲ್ಲೂ ಈ ಸಮಸ್ಯೆಯನ್ನು ಹೊಂದಿದ ಮಕ್ಕಳನ್ನು ನೋಡುತ್ತಿದ್ದೇವೆ. ಏನೇನಿರಬಹುದು ಈ ಸ್ಕ್ರೀನ್ ಅಡಿಕ್ಷನ್ ಸಮಸ್ಯೆಗೆ ಕಾರಣಗಳು
೧* ಮೇಲೆ ಹೇಳಿದಂತೆ ತಂದೆ ತಾಯಿ ಜೀವನ ಜಂಜಾಟದಲ್ಲಿ ಕಳೆದುಹೋಗಿರುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಕೆಲಸ. ಸಂಜೆಯ ನಂತರ ಆಯಾಸವಾಗಿರುತ್ತದೆ ಆ ಕಾರಣದಿಂದ ಸ್ವಲ್ಪ ರೆಸ್ಟ್. ಈ ಎಲ್ಲಾ ಸಮಯಗಳಲ್ಲಿ ಮಗು ಏನು ಮಾಡುತ್ತಿರುತ್ತದೆ ಅಥವಾ ಮಾಡಬೇಕು? ಎಂಟರಿಂದ ಮೂರು/ನಾಲ್ಕರವರೆಗೆ ಸ್ಕೂಲು. ಶಾಲೆ ಬಿಟ್ಟ ಮೇಲೆ ಹಲವಾರು ಕ್ಲಾಸ್ ಗಳು (ಆ ಮಗುವಿಗೆ ಇಷ್ಟವಿದೆಯೋ ಇಲ್ಲವೋ ) ಅವೆಲ್ಲಾ ಮುಗಿಸಿ ಬರುವಷ್ಟರಲ್ಲಿ ಸಂಜೆ ಏಳಾಗಬಹುದು ಎಂಟಾಗಬಹುದು. ಅದೇ ಸಮಯದಲ್ಲಿ ತಾಯ್ತಂದೆಯರು ಬಂದಿರುತ್ತಾರೆ. ಅವರಿಗೂ ಆಯಾಸ. ಮಗುವಿನ ಕೈಗೆ ಮೊಬೈಲ್ ಅಥವಾ ಇವರು ನೋಡುವ ಟಿವಿಯೊಟ್ಟಿಗೆ ಮಗುವೂ ಕೂತು ನೋಡುತ್ತದೆ. ಮನೆಯೊಳಗೆ ಮಾತಿನ ಬರ ಕಾಣುತ್ತದೆ. ಯಾರೊಟ್ಟಿಗೆ ಯಾರೂ ಮಾತಾಡದೆ (ಹೆಚ್ಚೆಂದರೆ ಒಂದು ಲೋಟ ನೀರು, ಕಾಫಿ, ತಿಂಡಿ ತಾ ಇತ್ಯಾದಿ) ಮಾತಾಡಿದರೆ ಸ್ಕೂಲಿನಲ್ಲಿ ಏನಾಯ್ತು? ಏನು ಹೇಳಿಕೊಟ್ಟರು? ಇಷ್ಟಕ್ಕೆ ಮಾತು ಮುಕ್ತಾಯಗೊಳ್ಳುತ್ತದೆ. ಈ ಸಂಭ್ರಮ ಮುಗಿಯುವಷ್ಟರಲ್ಲಿ ಗಂಟೆ ಒಂಭತ್ತು ಹತ್ತಾಗಿರುತ್ತದೆ. ಅಲ್ಲಿಗೆ ಮಲಗುವ ಸಮಯ. ಕೆಲ ಮನೆಗಳಲ್ಲಿ ಮಕ್ಕಳು ಅವರದೇ ಆದ ರೂಮಿನಲ್ಲಿ ಮಲಗಬಹುದು ಇನ್ನು ಕೆಲವು ಕಡೆ ಒಟ್ಟಿಗೆ ಮಲಗಬಹುದು. ಎರಡಕ್ಕೂ ಹೆಚ್ಚು ವ್ಯತ್ಯಾಸವಿರುವುದಿಲ್ಲ. ನಿದ್ದೆ ಬರ್ತಿದೆ ಮಲ್ಕೋ ಎನ್ನುತ್ತಾ ಮಗುವಿನ ಎದೆ ಮೇಲೆ ಕೈ ಹಾಕಿ ತಟ್ಟಿ ಮಲಗಿಸುವುದರಲ್ಲಿ ತಾಯ್ತಂದೆಯ ಪ್ರೀತಿ ಕೊನೆಗೊಳ್ಳುತ್ತದೆ.
೨* ಮಕ್ಕಳ ಕೈಗೆ ಸುಲಭವಾಗಿ ಸಿಗುವಂತೆ ಗ್ಯಾಡ್ಜೆಟ್ ಗಳನ್ನು ಇಡುವುದು. ಹೈ ಫೈ ಮನೆಗಳಲ್ಲೇ ಎಂದಲ್ಲ ಎಲ್ಲಾ ಮನೆಗಳನ್ನೂ ಆಂಡ್ರಾಯ್ಡ್ ಅಥವಾ ಐ ಫೋನ್ಗಳು ಆಳತೊಡಗಿವೆ. ಇದು ತಪ್ಪಲ್ಲ. ಅವರ ಅನಿವಾರ್ಯತೆ (ಅವಶ್ಯಕತೆಯಿದಯೋ ಇಲ್ಲವೋ ಅದು ಬೇರೆ ಪ್ರಶ್ನೆ) ಸಹಜವಾಗಿ ಮಕ್ಕಳ ಕುತೂಹಲದ ಮಟ್ಟ ಹೆಚ್ಚೇ ಆಗಿರುತ್ತದೆ. ಅವು ಮೊಬೈಲ್ ಗಳಲ್ಲಿ ಆಡಲು ಆರಂಭಿಸುತ್ತವೆ. ಗೇಮ್ ಗಳಿಂದ ಆರಂಭಿಸಿ ಸೋಶಿಯಲ್ ಮೀಡಿಯಾದವರೆಗೂ ತಮ್ಮನ್ನು ವಿಸ್ತರಿಸಿಕೊಳ್ಳುತ್ತವೆ. ಒಮ್ಮೆ ಅದರೆಡೆಗೆ ಆಕರ್ಷಿತರಾದರೆ ಅದು ಅವರನ್ನು ಆವರಿಸಿಕೊಂಡುಬಿಡುತ್ತದೆ. ಕಾರಣ ಮೊಬೈಲ್ ಅಥವಾ ಇತರೆ ಗ್ಯಾಡ್ಜೆಟ್ ಗಳಲ್ಲಿನ ಚಲನಶೀಲತೆ ಮತ್ತು ವಿಷಯದ ಪ್ರವಾಹ. ಗೇಮ್ ಗಳಲ್ಲಿ ಬರುವ ಚಲನೆ ಮಕ್ಕಳನ್ನು ಬಲು ಬೇಗ ಆಕರ್ಷಿಸುತ್ತದೆ. ಯು ಟ್ಯೂಬ್ ಗಳಲ್ಲಿ ಬರುವ ರೈಮ್ ಗಳು ಕಾರ್ಟೂನ್ ಗಳು ಅವರನ್ನು ಹೆಚ್ಚು ಮೋಡಿ ಮಾಡುತ್ತವೆ. ’ಸ್ವಲ್ಪ ಹೊತ್ತು ತಾನೆ, ನೋಡಲಿ ಬಿಡು, ನಮಗೂ ಕೆಲ್ಸ ಬೇಗ ಆಗುತ್ತೆ. ಕಾರ್ಟೂನ್/ ಮತ್ತೆ ಗೇಮ್ ಬಿಟ್ಟು ಬೇರೆ ನೋಡಲ್ಲ’ ಎನ್ನುವ ಸಮರ್ಥನೆಯನ್ನು ಪೋಷಕರು ಕೊಡುತ್ತಾರೆ. ಅವರ ಕೆಲಸಗಳು ಬೇಗ ಮುಗಿಸಲು ಕೆಲ ಪೋಷಕರು ಮೊಬೈಲನ್ನು ಮಕ್ಕಳ ಕೈಗೆ ಕೊಟ್ಟು ಬಿಡುವುದೂ ಇದೆ. ಇರಲಿ, ಕಾರ್ಟೂನ್ ತಾನೆ ನೋಡ್ತಿರೋದು ಹೌದು ಆದರೆ ಹಾಗೆ ಕಾರ್ಟೂನ್ ನೋಡುವಾಗ ಬರುವ ಪಾಪಪ್ ವೀಡಿಯೋಗಳನ್ನು ಯಾವ ಲೆಕ್ಕಕ್ಕೆ ಸೇರಿಸುತ್ತೀರ? ಒಂದಾದ ಮೇಲೊಂದು ವೀಡಿಯೋಗಳು ಬರುತ್ತಿರುತ್ತವೆ. ಕುತೂಹಲಿ ಮಗು ಅವನ್ನು ನೋಡಲು ಆರಂಬಿಸುತ್ತದೆ. ಕಡೆಗೆ ಅದರಲ್ಲೇ ಮುಳುಗುತ್ತದೆ. ಮನೆಯಲ್ಲಿ ಮಾತಿಗೆ ಜಾಗವೇ ಇರುವುದಿಲ್ಲ.
೩* ಈ ಪೀಳಿಗೆಯ ಹೆಚ್ಚಿನ ಪೋಷಕರಿಗೆ ಮಕ್ಕಳೊಂದಿಗೆ ಹೇಗೆ ಸಂವಹಿಸಬೇಕು (ಕನೆಕ್ಟ್ ಆಗಬೇಕು) ಎನ್ನುವುದೇ ತಿಳಿದಿಲ್ಲ. ಒಬ್ಬ ಪೋಷಕರು ಹೇಳಿದ ಮಾತು ನೆನಪಾಗುತ್ತದೆ " ಏನ್ ಮಾತಾಡೋದು ಸರ್, ಏನ್ ಮಾತಾಡ್ಬೇಕು ಅಂತ ಗೊತ್ತಾಗೊದೇ ಇಲ್ಲ" ಮಕ್ಕಳೊಂದಿಗೆ ಮಾತಾಡಲು ಮಾತೇ ಇಲ್ಲವೇ? ಎಂದರೆ ಊಹೂಂ. ಕಾರಣ ಇವರೂ ಹಾಗೇ ಬೆಳೆದಿರುತ್ತಾರೆ. ಒಬ್ಬಳೇ ಮಗಳು/ಮಗ ಸದಾ ಒದು ಮಾರ್ಕ್ ಗಳಲ್ಲಿ ಗೆದ್ದು ಬೀಗಿರುತ್ತಾರೆ. ಸಮಾಜದೊಟ್ಟಿಗೆ ಮಾತೆಂದರೆ ಬ್ಯುಸಿನೆಸ್ ನ ಮಾತು ಬಿಟ್ಟರೆ ಬೇರೆ ಆಡಲು ಬಾರದವರು. ಮಾತೆಂದರೆ ಸ್ಕೂಲ್ ಆಯ್ತಾ? ಏನ್ ಹೇಳ್ಕೊಟ್ರು? ಹೋಂವರ್ಕ್ ಮಾಡಿದ್ಯಾ? ಅವನಿಗಿಂತ ಜಾಸ್ತಿ ಮಾರ್ಕ್ಸ್ ತೆಗೀಬೇಕು, ಯಾಕಿಷ್ಟು ಕಮ್ಮಿ ಮಾರ್ಕ್ಸ್? ಇವಿಷ್ಟರ ಸುತ್ತಾ ಗಿರ್ಕಿ ಹೊಡೆಯುತ್ತವೆ. ಕನೆಕ್ಟ್ ಆಗಲು ಬಾರದ ಪೋಷಕರು ಮಕ್ಕಳ ಕೈಗೆ ಮೊಬೈಲ್ ಅಥವಾ ರಿಮೋಟ್ ಕೊಟ್ಟು ಸುಮ್ಮನಾಗುತ್ತಾರೆ. ಮತ್ತೆ ಮನೆಯಲ್ಲಿ ಮಾತು ಇಲ್ಲವಾಗುತ್ತದೆ.
೪* ಟೆಕ್ನೋ ಸ್ಕೂಲ್ ಗಳಲ್ಲಿ ಶಿಕ್ಷಕರೇ ಮಕ್ಕಳ ಕೈಗೆ ಟ್ಯಾಬ್ ಕೊಟ್ಟು ಕೂರಿಸಿ ಪಾಠ ಮಾಡುವುದಿದೆ. ಅದನ್ನೇ ಅಭ್ಯಾಸ ಮಾಡಿಕೊಂಡ ಮಕ್ಕಳು ಮನೆಯಲ್ಲೂ ಅದನ್ನೇ ಮಾಡುತ್ತಾರೆ. ಒಬ್ಬರಿಗೊಬ್ಬರು ಅಪರಿಚಿತರಾಗಿ ಉಳಿದುಬಿಡುತ್ತಾರೆ.
೫* ಹೊಸದಾಗಿ ಮಾರುಕಟ್ಟೆಗೆ ಅಲೆಕ್ಸಾ ಎಂಬ ಉತ್ಪನ್ನ ಬಂದಿದೆ ಅಪ್ಪ ಅಮ್ಮನ ಜಾಗವನ್ನು ಅದು ತುಂಬುತ್ತದೆ. ಮಾತು ಕತೆ ಎಲ್ಲವೂ ಅದರೊಂದಿಗೇ? ಮಗು ನಿರ್ಜೀವವಾದ ಆದರೆ ಕೃತಕ ಬುದ್ಧಿಮತ್ತೆಯ ವಸ್ತುವಿನೊಂದಿಗೆ ಸಂವಹನ ಮಾಡುವುದು ಪೋಷಕರೊಟ್ಟಿಗೆ ಮಾತು ನಿಲ್ಲಿಸುವುದು ಒಟ್ಟಿಗೇ ಆಗುತ್ತದೆ.
ಹೀಗೆ ಸ್ಕ್ರೀನ್ ಗಳನ್ನು ಅಪ್ಪಿಕೊಳ್ಳುವ ಮಕ್ಕಳು ಸ್ವಾಭಾವಿಕವಾಗಿ ತಾಯ್ತಂದೆಯರೊಟ್ಟಿಗೆ ಮಾತಾಡುವುದು ಕಡಿಮೆಯಾಗುತ್ತದೆ. ಬ್ಯುಸಿನೆಸ್ ಮಾತಿನಂತೆ ಊಟ, ತಿಂಡಿ ಬಟ್ಟೆ, ಫೀಸು, ಕ್ಲಾಸು, ಮಾರ್ಕ್ಸು, ಇಷ್ಟರಲ್ಲೇ ಮುಕ್ತಾಯವಾಗುತ್ತದೆ. ಅಸ್ವಾಭಾವಿಕವಾದ ಈ ನಡುವಳಿಕೆಗೆ ಪೋಷಕರೇ ಕಾರಣ. ಮೇಲೆ ಹೇಳಿದ ಕೇಸ್ ನಲ್ಲಿ ಹುಡುಗನನ್ನು ಮಾತಾಡಿಸಿದಾಗ ಅವನು ಹೇಳಿದ್ದಿಷ್ಟು. ’ ಮನೆಯಲ್ಲಿ ಯಾರ್ಗೂ ಟೈಮ್ ಇಲ್ಲ ಸರ್ ಅಪ್ಪ ಅಫೀಸ್ ಕೆಲ್ಸದಲ್ಲಿ ಬ್ಯುಸಿ ಇರ್ತಾರೆ. ಮನೆಗೆ ಬಂದ್ ಮೇಲೆ ಆಫೀಸ್ ಕೆಲ್ಸ ಮಾಡಲ್ಲ ಅಂತಾರೆ ಆದರೆ ಮೊಬೈಲ್ ನಲ್ಲಿ ಕಂಪನಿ ಮೈಲ್ ಸೆಟ್ ಆಗಿದೆ ಸೋ ಆಗಾಗ ಚೆಕ್ ಮಾಡ್ತಿರ್ತಾರೆ. ಆಟ ಅಂದ್ರೆ ಕೂತು ಬೋರ್ಡ್ ಗೇಮ್ ಆಡೋದು. ಅದೂ ಸೀರಿಯಸ್ಸಾಗಿ ಅದೂ ವೀಕೆಂಡಲ್ಲಿ ಮಾತ್ರ. ಹಾಗಾಗಿ ನಾನು ಮೊಬೈಲ್ ನಲ್ಲಿ ಇನ್ಫರ್ಮೇಶನ್ ನೋಡ್ಕೊಂಡು ನಾಲೆಡ್ಜ್ ಬೆಳೆಸಿಕೊಳ್ತೀನಿ’ ವಾಸ್ತವವಾಗಿ ಆ ಹುಡುಗ ಮೊಬೈಲ್ ನಲ್ಲಿ ಜ್ಞಾನ ಬೆಳೆಸಿಕೊಳ್ಳುವ ವಿಷಯಗಳನ್ನೇ ನೋಡುತ್ತಿದ್ದ. ಆದರೆ ಆ ಭರಾಟೆಯಲ್ಲಿ ಮನೆಯವರೊಂದಿಗೆ ಮಾತು ನಿಲ್ಲಿಸಿದ್ದ. ಏನಾದ್ರೂ ಪ್ರಾಜೆಕ್ಟ್ ಮಾಡಬೇಕು ಎನಿಸಿದಾಗ ಅಪ್ಪ ಅಮ್ಮಂದಿರೇ ಹೇಳಿದ್ದರಂತೆ ಗೂಗಲ್ ಸರ್ಚ್ ಮಾಡು ಸಿಗುತ್ತೆ ಅಂತ. ಸರಿ ಗೂಗಲ್ ನ್ನು ನೆಚ್ಚಿಕೊಂಡ ಅದು ಒಂದು ವಿಷಯಕ್ಕೆ ಹಲವಾರು ಲಿಂಕ್ ಕೊಡುತ್ತದೆ. ಒಂದೊಂದೇ ಲಿಂಕ್ ತೆರೆಯುವುದು ವಿಷಯವನ್ನು ನೋಡುವುದು. ಇದಕ್ಕಿಂದ ಇನ್ನೊಂದು ಲಿಂಕ್ ನಲ್ಲಿ ಹೆಚ್ಚು ವಿಷಯವಿರಬಹುದು ಎನಿಸಿ ಮತ್ತೆ ಇನ್ನೊಂದು ಲಿಂಕ್ ನ್ನು ತೆರೆದು ನೋಡುವುದು ಹೀಗೆ ಸಾಗುತ್ತದೆ ಅವನ ಕ್ರಿಯೆಗಳು. ಇದಕ್ಕೆ ಉತ್ತರ ಕೊನೆಯಲ್ಲಿ ಕೊಡೋಣ
ಸಂಪನ್ಮೂಲ ವ್ಯಕ್ತಿ ( ಸ್ಪೆಷಲ್ ಪಾಯಿಂಟ್ ಆಫ್ ಕಾಂಟಾಕ್ಟ್ ಅಥವಾ ಸಿಂಗಲ್ ಪಾಯಿಂಟ್ ಆಫ್ ಕಾಂಟಾಕ್ಟ್ )
ಹಿಂದೆ ಮನೆಯಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು (ಯುನಿಟ್) ಇರುತ್ತಿತ್ತು. ಏನೇ ವಿಷಯ ಬಂದರೂ ಮಕ್ಕಳು ಆ ವ್ಯಕ್ತಿಯನ್ನು ಕೇಳುವುದು ಪರಿಪಾಠವಾಗಿರುತ್ತಿತ್ತು. ಸಾಮಾನ್ಯವಾಗಿ ಆ ವ್ಯಕ್ತಿ ಅಪ್ಪನಾಗಿರುತ್ತಿದ್ದ. ಅವನೇ ಸಂಪನ್ಮೂಲ ವ್ಯಕ್ತಿ. ಬಣ್ಣ, ರುಚಿ, ಅಚ್ಚುಕಟ್ಟು ಕಲೆ, ಪಾಠ ಇತ್ಯಾದಿಗಳಿಗೆ ಅಮ್ಮ ಸಂಪನ್ಮೂಲ ವ್ಯಕ್ತಿಯಾಗಿರುತ್ತಿದ್ದಳು. ಉಡುಗೆ ತೊಡುಗೆ ಆ ಕಾಲಘಟ್ಟದ ಶೈಲಿಗೆ ಅಕ್ಕ/ಅಣ್ಣಂದಿರು ಸಂಪನ್ಮೂಲ ವ್ಯಕ್ತಿಗಳಾಗಿರುತ್ತಿದ್ದರು. ಈಗ ಆ ವ್ಯಕ್ತಿಗಳು ಇಲ್ಲ. ಒಬ್ಬನೇ ಮಗ/ಮಗಳು ಇರುವ ಕುಟುಂಬಗಳೇ ಹೆಚ್ಚು. ತಮ್ಮೆಲ್ಲಾ ಪ್ರೀತಿಯ ಪ್ರವಾಹವನ್ನು ಅವರಿಗೇ ಹೊಯ್ದುಬಿಡುತ್ತಾರೆ. ಮತ್ತು ಶಾಲೆಗೆ ಹೋಗುವ ಸಮಯದಲ್ಲಿ ಇವರು ಕೆಲಸದಲ್ಲಿ ಬ್ಯುಸಿಯಾಗಿಬಿಡುತ್ತಾರೆ. ಮಕ್ಕಳಿಗೆ ಉತ್ತಮವಾದ ಬದುಕನ್ನು ಕಟ್ಟಿಕೊಡುವ ಕಾಯಕದಲ್ಲಿ ಮುಳುಗಿಬಿಡುತ್ತಾರೆ. ಮಕ್ಕಳ ಪ್ರಶ್ನೆಗಳಿಗೆ ಉತ್ತರ ಕೊಡುವ ಪುರುಸೊತ್ತು ಇರುವುದಿಲ್ಲ. ಇನ್ನೂ ಸತ್ಯವಾದ ಮಾತೆಂದರೆ ಸ್ವತಃ ತಾಯ್ತಂದೆಯರಿಗೂ ಸಹ ಆ ವಿಷಯಗಳ ಬಗ್ಗೆ ಜ್ಞಾನವಿರುವುದಿಲ್ಲ. ಗೊತ್ತಿರುವುದನ್ನು ಹೇಳುತ್ತಾರೆ ಮಿಕ್ಕಂತೆ ಗೊತ್ತಿಲ್ಲದುದನ್ನು ಕಲಿತು ಹೇಳುವ ಗೋಜಿಗೆ ಹೋಗುವುದಿಲ್ಲ. ಗೂಗಲ್ ಮಹಾಶನ ಮೊರೆ ಹೋಗಿ ಅಲ್ಲಿಂದ ಎರವಲು ತರುತ್ತಾರೆ. ಸ್ವತಃ ಅಧ್ಯಯನಶೀಲತೆಯನ್ನು ಮರೆತುಬಿಟ್ಟಿದ್ದಾರೆ. ಫಾಸ್ಟ್ ಫುಡ್ ನಂತೆ ಎಲ್ಲವನ್ನೂ ಗೂಗಲ್ ನಿಂದ/ ಅಲೆಕ್ಸಾ ಳನ್ನು ಕೇಳಿ ತರುತ್ತಾರೆ. ಪ್ರಾಜೆಕ್ಟ್ ಗಳನ್ನು ಗೂಗಲ್ ನೋಡದೆ ತಯಾರಿಸುವ ಪೋಷಕರ ಸಂಖ್ಯೆ ತುಂಬಾ ಕಡಿಮೆ. ಮಕ್ಕಳೊಂದಿಗೆ ಬೆರೆತು ಕೂತು ಅವರ ಬುದ್ಧಿಯನ್ನು ತೀಡುತ್ತಾ ತಮ್ಮ ಬುದ್ಧಿಯನ್ನೂ ಹರಿತಗೊಳಿಸಿಕೊಳ್ಳುವ ಅವಕಾಶವನ್ನು ಪೋಷಕರು ಕಳೆದುಕೊಂಡುಬಿಡುತ್ತಾರೆ. ಇವನ್ನೆಲ್ಲಾ ನೋಡಿದ ಮಕ್ಕಳು ಅಪ್ಪ ಅಮ್ಮನ ಹೊರತಾಗಿ ಮತ್ತೊಂದು ಸಂಪನ್ಮೂಲವಾದ ಗೂಗಲ್ /ಅಲೆಕ್ಸಾಳನ್ನು ಅಪ್ಪಿಕೊಳ್ಳುತ್ತಾರೆ. ಅಪ್ಪನೆಂದರೆ ಸಮುದ್ರ, ಅಮ್ಮನೆಂದರೆ ಭೂಮಿ ಎನ್ನುವ ಕವಿಕಲ್ಪನೆ ಕಲ್ಪನೆಯಾಗೇ ಉಳಿದುಬಿಡುತ್ತದೆ. SPOC(Single/Special Point Of Contact) ಅಪ್ಪ ಅಮ್ಮ ನ ಹೊರತಾಗಿ ಮತ್ತೊಂದಾಗಿಬಿಟ್ಟಾಗ ಮಕ್ಕಳು ಸ್ವಾಭಾವಿಕವಾಗಿ ಅಪ್ಪ ಅಮ್ಮನೊಟ್ಟಿಗೆ ಮಾತಾಡುವುದು ಕಡಿಮೆಯಾಗುತ್ತದೆ.
ಅನ್ಲೈನ್ ಗೇಮ್ ಗಳಲ್ಲಿ ಚಾಟ್ ಮಾಡಿ ಆಡುವ ಗೇಮ್ ಗಳಿವೆ. ಎದುರಿಗಿರುವ ವ್ಯಕ್ತಿ ಯಾರೆಂದೂ ತಿಳಿಯದೆ ಸುಮ್ಮನೆ ಮಾತಾಡುತ್ತಾ ಆಡುವ ಮಕ್ಕಳು ನಿಜವಾದ ಜನರು ಸಿಕ್ಕಾಗ ಹೇಗೆ ಮಾತಾಡಬೇಕೆಂದು ತಿಳಿಯದೆ ಒದ್ದಾಡುವುದೂ ಇದೆ. ಮೆಸೇಜ್ ಗಳಲ್ಲಿ/ ಚಾಟ್ ಗಳಲ್ಲಿ ಪ್ರಜ್ಞಾಪೂರ್ವಕವಾಗಿ ಆಡುವ ಮಾತಿಗೂ ನೇರಾನೇರ ಆಡುವ ಮಾತಿಗೂ ವ್ಯತ್ಯಾಸವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇವೆಲ್ಲರಿಂದ ಮಕ್ಕಳು ಭಾವನಾತ್ಮಕ ಗುಣಗಳನ್ನು, ಆಲೋಚಿಸುವ ಮನಸ್ಸನ್ನು ಕ್ರಮೇಣ ಕಳೆದುಕೊಳ್ಳುತ್ತಾರೆ. ಸದಾ ಕಾಲ ಪರದೆ(ಸ್ಕ್ರೀನ್)ಯೊಳಗೆ ಮುಖ ಹುದುಗಿಸುವುದರಿಂದ ಮಕ್ಕಳು ಒಂದೇ ಕಡೆ ಕುಳಿತುಕೊಂಡು ಪೋಷಕರಿಗೆ ಅನುಕೂಲ ಮಾಡಿಕೊಡಬಹುದು ಆದರೆ ಪೋಷಕರೊಟ್ಟಿಗೆ/ಜನರೊಟ್ಟಿಗೆ ಸಂವಹಿಸುವ ಗುಣವನ್ನು ಕಳೆದುಕೊಳ್ಳುವುದು ಸತ್ಯ. ಹೀಗಾಗುವುದರಿಂದ ಸ್ಕ್ರೀನ್ ಅಡಿಕ್ಷನ್ ಎಂದು ಹಣೆಪಟ್ಟಿ ಕಟ್ಟಿ ಅವನನ್ನು ಡಿ ಅಡಿಕ್ಷನ್ ಸೆಂಟರ್ ಗೆ ತಳ್ಳ ಬೇಕಾಗುತ್ತದೆ.
ಪೋಷಕರು ಏನು ಮಾಡಬಹುದು?
* ಮೊದಲು ತಮ್ಮ ಆದ್ಯತೆಗಳನ್ನು ಪಟ್ಟಿಮಾಡಿಕೊಳ್ಳಿ. ಕೆಲಸ/ಹಣಸಂಪಾದನೆ, ವ್ಯಕ್ತಿಗತ ಅಭಿರುಚಿ/ ಹವ್ಯಾಸ, ಮಕ್ಕಳೊಂದಿಗೆ ಕಾಲ ಕಳೆಯುವುದು ಹೀಗೆ ಹಲವಾರು ಆಧ್ಯತೆಗಳಿರುತ್ತವೆ. ಮಕ್ಕಳಾದಮೇಲೆ ನಿಮ್ಮ ಆದ್ಯತೆ ಮಕ್ಕಳಾಗಿರಲಿ. ಆದ್ಯತೆ ಮಕ್ಕಳು ಎಂದಮಾತ್ರಕ್ಕೆ ಮಕ್ಕಳ ಎಲ್ಲ ವಿಷಯಗಳಲ್ಲೂ ಅತಿಯಾಗಿ ತೊಡಗಿಸಿಕೊಳ್ಳದಿರಿ. ಮಕ್ಕಳೊಂದಿಗೆ ಕಳೆಯುವ Quality Time ಮೌಲ್ಯಯುತ ಸಮಯ, ಮಕ್ಕಳ ಶಿಕ್ಷಣಕ್ಕೆ ಹೊರತಾಗಿರಲಿ. ನಿಮ್ಮ ಅಭ್ಯಾಸ ಅಭಿರುಚಿ, ಬಾಲ್ಯದ ನೆನಪು, ಆಟ, ತಮಾಷೆ, ದಿನಸಿ , ತರಕಾರಿ, ಮನೆಯ ಖರ್ಚುವೆಚ್ಚ, ಹೀಗೆ ಎಲ್ಲದರಲ್ಲೂ ಅವುಗಳನ್ನು ಸೇರಿಸಿಕೊಳ್ಳಿರಿ.
* ಹೊಸ ಕತೆ , ಆಟಗಳನ್ನು ಮಕ್ಕಳೊಂದಿಗೆ ಸೇರಿ ನೀವೇ ಕಂಡುಹಿಡಿಯಿರಿ.
* ಮನೆಯಲ್ಲಿ ಎಲ್ಲರೂ ಸೇರಿ ನಾಟಕದಂತಹ ಭಾವನೆಗಳನ್ನು ಪ್ರಚೋದಿಸುವ ಆಟವನ್ನು ಆಡಿರಿ. ಇದರಿಂದ ಮಕ್ಕಳು ಯಾವ ವಿಷಯಕ್ಕೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನು ಕಲಿಯುತ್ತಾರೆ.
* ಆದಷ್ಟು ಆಟದ ಸಾಮಾನುಗಳನ್ನು ನೀವೇ ತಯಾರಿಸಿ. (ಕೆಲವನ್ನು ತಯಾರಿಸಲು ಆಗುವುದಿಲ್ಲವೆನ್ನುವುದು ಸತ್ಯ ಅವನ್ನು ಕೊಳ್ಳುವುದು ಅನಿವಾರ್ಯ)
* ಊಟದ ಸಮಯ, ಆಟದ ಸಮಯದಲ್ಲಿ ಮನೆಯ ಟಿವಿ ಆಫ್ ಆಗಿರಲಿ. ನೀವು ಟಿವಿ ನೋಡುತ್ತಾ ಮಕ್ಕಳೊಂದಿಗೆ ಆಟವಾಡುವುದು, ಸಂಪೂರ್ಣವಾಗಿ ಆಟದಲ್ಲಿ ತೊಡಗಿಸಿಕೊಂಡಂತೆ ಇರುವುದಿಲ್ಲ.
* ಕೆಲಸದಿಂದ ಬಂದಾಗ ಆಯಾಸವಾಗಿರುತ್ತದೆ ಎನ್ನುವುದು ಸತ್ಯ. ಆದರೆ ಹೇಗಾದರೂ ಸರಿ ನಿಮ್ಮ ಎನರ್ಜಿಯನ್ನು ಉಳಿಸಿಕೊಳ್ಳಿ. ಚಲನೆಯಿರುವ ಆಟಗಳನ್ನು ಆಡಿ. ಜೂಟಾಟ, ಕಣ್ಣಾಮುಚ್ಚಾಲೆ, ಕುಂಟಾಟ ಇತ್ಯಾದಿ.
* ಮಕ್ಕಳು ಪ್ರಶ್ನೆಯನ್ನು ಕೇಳಿದಾಗ ಸಾಧ್ಯವಾದಷ್ಟು ಉತ್ತರಿಸಿ, ತಿಳಿಯದಿದ್ದರೆ ’ತಿಳಿದುಕೊಂಡು ಹೇಳುತ್ತೇನೆ’ ಎಂದು ಸತ್ಯವನ್ನು ಹೇಳಿ. ಎಲ್ಲಿಂದಲಾದರೂ ಸರಿ ಆ ವಿಷಯವನ್ನು ಓದಿ ತಿಳಿದುಕೊಂಡು ಮಗುವಿಗೆ ಅರ್ಥವಾಗುವ ಹಾಗೆ ಸರಳವಾಗಿ ಹೇಳಿ. ಅಲೆಕ್ಸಾ ಗೂಗಲ್ ಲ್ಲಿ ಹುಡುಕಿಕೋ ಎನ್ನುವುದು ಅಥವಾ ಅವರೆದುರಿಗೇ ಹುಡುಕುವುದು ಬೇಡ. ಮಕ್ಕಳಿಗೆ ಹೀರೋ ಅಮ್ಮ ಅಪ್ಪನೇ ಆಗಬೇಕು ಗೂಗಲ್ ಅಲೆಕ್ಸಾಗಳಲ್ಲ.
* ಟಿವಿಯಿಂದ ಮಕ್ಕಳನ್ನು ಸಂಪೂರ್ಣವಾಗಿ ಬೇರೆ ಮಾಡಲು ಸಾಧ್ಯವಿಲ್ಲ. ಸ್ಕ್ರೀನ್ ಟೈಮ್ ಸೆಟ್ ಮಾಡಿ. ’ಇಂತಿಷ್ಟು ಹೊತ್ತು ಮಾತ್ರ ನೋಡೋಣ’ ಎಂದು ನೀವೂ ಅವರ ಚಾನೆಲ್ಲನ್ನು ನೋಡಿ. ಸಮಯ ಮುಗಿದಾಗ ಟಿವಿ ನಿಲ್ಲಿಸಿ.
* ಸಾಧ್ಯವಾದಷ್ಟು ಮನೆಯಲ್ಲಿರುವ ಎಲ್ಲರೂ ಆಟದಲ್ಲಿ ತೊಡಗಿಸಿಕೊಳ್ಳಿ. ಪಾಠದಲ್ಲೂ ತೊಡಗಿಸಿಕೊಳ್ಳಿ. ಸಾಧ್ಯವಾದರೆ ನೀವೂ ಬರೆದು ಓದಿ ಮಾಡಿ. ಬರಿಯ ಉಪನ್ಯಾಸದಿಂದ ಏನೂ ಆಗದು.
* ಪ್ರಾಜೆಕ್ಟ್ ಗಳನ್ನು ಟೈಪ್ ಮಾಡಿಸಿ ತರುವುದು ಬೇಡ. ಕೈಯಲ್ಲಿ ಕೂತು ಬರೆಯಲಿ. ನೀವು ಜೊತೆಯಲ್ಲಿ ಬರೆಯಿರಿ.
* ಅಡುಗೆ ಮನೆಗೆ ಮಕ್ಕಳನ್ನು ಸೇರಿಸಿಕೊಳ್ಳಿ. ಮಾತನಾಡಿಸುತ್ತಾ ತರಕಾರಿ ಹೆಚ್ಚುವುದು, ಹಿಟ್ಟು ನಾದುವುದು, ನೀರು ಕುದಿಯುವುದು ಎಲ್ಲವನ್ನೂ ಗಮನಿಸಲಿ. ಈ ಕ್ರಿಯೆಯಿಂದ ಬಣ್ಣ, ಕೈಕಾಲುಗಳ ಚಲನೆ , ಒತ್ತಡ, ಬಿಸಿ ಆವಿ, ಎಲ್ಲವನ್ನೂ ತಿಳಿದುಕೊಳ್ಳುತ್ತಾರೆ/ಗಮನಿಸುತ್ತಾರೆ
ಹೀಗೆ ಎಲ್ಲದರಲ್ಲೂ ಮಕ್ಕಳನ್ನು ತೊಡಗಿಸಿಕೊಳ್ಳುವುದರಿಂದ ಮಕ್ಕಳು ಸ್ಕ್ರೀನ್ ಗೆ ಅಂಟಿಕೊಳ್ಳುವುದು ಕಡಿಮೆಯಾಗುತ್ತದೆ. ಮಕ್ಕಳ SPOC ಅಪ್ಪ, ಅಮ್ಮ ಮತ್ತು ಮನೆಯವರಾಗಿದ್ದರೆ ಮಕ್ಕಳು ಸ್ಕ್ರೀನ್ ಕಡೆ ಗಮನ ಹರಿಸುವುದು ನಿಲ್ಲುತ್ತದೆ. ಈಗ ಪೋಷಕರು ಮೈಮರೆತು ಮುಂದೆ ಮಕ್ಕಳು ಅವರನ್ನು ಮಾತನಾಡಿಸುವುದಿಲ್ಲ ಎಂಬ ಆರೋಪ ಹೊರಿಸುವುದು ತರವಲ್ಲ.
Comments
ಉ: ಸ್ಕ್ರೀನ್ ಅಡಿಕ್ಷನ್ ಮತ್ತು ಮಕ್ಕಳು
ಜನಜಾಗೃತಿ ಮೂಡಿಸುವ ಕೆಲಸ ಇಂದಿನ ತುರ್ತು ಅಗತ್ಯವಾಗಿದೆ. ಇದು ಹಿರಿಯರು, ಕಿರಿಯರೆನ್ನದೆ ಎಲ್ಲರಿಗೂ ಚಟವಾಗಿಬಿಟ್ಟಿದೆ.
In reply to ಉ: ಸ್ಕ್ರೀನ್ ಅಡಿಕ್ಷನ್ ಮತ್ತು ಮಕ್ಕಳು by kavinagaraj
ಉ: ಸ್ಕ್ರೀನ್ ಅಡಿಕ್ಷನ್ ಮತ್ತು ಮಕ್ಕಳು
ಆಹಾ , ಎಷ್ಟು ಚಂದದ ಸಮಯೋಚಿತವಾದ ಬರಹ ..