ಸ್ಟಾರ್ ಲಿಂಕ್ ನೆಟ್ ಸೇವೆ ದೇಶದ ಭದ್ರತೆಗೆ ಅಪಾಯ ತರದಿರಲಿ

ದೇಶದ ಯಾವುದೇ ಅತ್ಯಂತ ಕುಗ್ರಾಮಕ್ಕೂ ಗುಣಮಟ್ಟದ ಇಂಟರ್ನೆಟ್ ಸೇವೆ ಒದಗಿಸಬಲ್ಲ ಸಾಮರ್ಥ್ಯ ಹೊಂದಿರುವ ಅಮೇರಿಕ ಎಲಾನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಕಂಪೆನಿಗೆ ಭಾರತದಲ್ಲಿ ಸೇವೆ ಒದಗಿಸುವ ಅನುಮತಿ ಸಾಧ್ಯತೆ ದಟ್ಟವಾಗಿದೆ ಎಂಬ ಮಾತುಗಳು ಕೇಳಿಬಂದಿದೆ. ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಸಂಬಂಧ ಟೆಲಿಕಾಂ ಕಂಪೆನಿಗಳಾದ ಏರ್ ಟೆಲ್ ಮತ್ತು ಜಿಯೋ ಒಪ್ಪಂದ ಮಾಡಿಕೊಂಡಿವೆ. ಆದರೆ ದೇಶದ ಭದ್ರತೆ ವಿಷಯದಲ್ಲಿ ಸಾಕಷ್ಟು ಆತಂಕಗಳಿದ್ದು ಈ ಕುರಿತು ಸರ್ಕಾರ ಗಮನ ಹರಿಸಬೇಕು. ಅಮೇರಿಕವನ್ನು ಮೆಚ್ಚಿಸಲು ಅನುಮತಿ ನೀಡಬಾರದು ಎಂದು ವಿಪಕ್ಷ ಕಾಂಗ್ರೆಸ್ ಸರಕಾರವನ್ನು ಒತ್ತಾಯಿಸಿದೆ. ಸಾಂಪ್ರದಾಯಿಕ ಇಂಟರ್ ನೆಟ್ ಗೆ ಹೋಲಿಸಿದರೆ ಸ್ಟಾರ್ ಲಿಂಕ್ ಸೇವೆ ವಿಭಿನ್ನ. ದೊಡ್ಡ ದೊಡ್ಡ ಉಪಗ್ರಹದ ಬದಲಾಗಿ ಭೂಮಿಯ ಕೆಳಕಕ್ಷೆ ಅಂದರೆ ಸಮುದ್ರಮಟ್ಟಕ್ಕಿಂತ ೩೦೦ ಮೈಲು ಎತ್ತರ ಪ್ರದೇಶದಲ್ಲಿ ಸಾಲಾಗಿ ೬೦೦ ಸಣ್ಣ ಉಪಗ್ರಹಗಳನ್ನು ಕೂರಿಸಿ ಅದರ ಮೂಲಕ ಮಸ್ಕ್ ಕಂಪೆನಿ ಸೇವೆ ನೀಡುತ್ತದೆ. ಇದಕ್ಕೆ ಡಿಟಿಎಚ್ ಸೇವೆ ಬಳಸಲು ಅಳವಡಿಸುವ ರೀತಿಯ ಮಿನಿ ಆಂಟೆನಾಗಳ ಅಗತ್ಯವಿದೆ. ಸಾಂಪ್ರದಾಯಿಕ ಇಂಟರ್ನೆಟ್, ಮೊಬೈಲ್ ಸೇವೆಗೆ ಹೋಲಿಸಿದರೆ ಸ್ಟಾರ್ ಲಿಂಕ್ ಸೇವೆ ಅತ್ಯಂತ ದುಬಾರಿ. ಆದರೆ ತಡೆರಹಿತ, ಅತ್ಯಂತ ವೇಗದಲ್ಲಿ, ಭೂಮಿಯ ಯಾವುದೇ ಭಾಗಕ್ಕೆ ಬೇಕಾದರೂ ಸೇವೆ ಲಭ್ಯ ಎಂಬುದು ಇದರ ಹೆಗ್ಗಳಿಕೆ.
ಆದರೆ ವಿದೇಶಿ ಕಂಪೆನಿಯ ಹಿಡಿತದಲ್ಲಿ ಟೆಲಿಕಾಂ ಸೇವೆ ಭಾರತದ ಭದ್ರತೆಗೆ ಅಪಾಯ ತರಬಹುದು ಎಂಬ ಆತಂಕ ಇದೆ. ದೇಶವಿರೋಧಿ ಶಕ್ತಿಗಳು ಇದರ ದುರ್ಬಳಕೆ ಮಾಡಬಹುದು. ಈ ಸೇವೆ ವ್ಯಾಪಕವಾದರೆ ಮೊಬೈಲ್ ಟವರ್ ಗಳ ಮೂಲಕ ಸಿಗುವಂತ ಸುಳಿವುಗಳು ಇನ್ನು ಮುಂದೆ ಭದ್ರತಾ ಸಂಸ್ಥೆಗಳಿಗೆ ಸಿಗದು. ಜೊತೆಗೆ ತುರ್ತು ಸಂದರ್ಭ, ಗಲಭೆಯಂಥ ಪ್ರಕರಣದ ವೇಳೆ ಸೇವೆ ಸ್ಥಗಿತದ ಅವಕಾಶ ಸರ್ಕಾರ ಬಳಿ ಇರುತ್ತದೆಯೋ ಇಲ್ಲವೋ ಎಂಬ ಆತಂಕ ಇದೆ. ಈ ಬಗ್ಗೆ ಇನ್ನೂ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿಲ್ಲ. ಆದರೆ ಟೆಳಿಕಾಂ ಸೇವೆಗಳ ನಿಯಂತ್ರಣಕ್ಕೆ ಅವಕಾಶ ಇರುವ ನಿಯಂತ್ರಣಾ ಕೊಠಡಿಯನ್ನು ಭಾರದಲ್ಲೇ ಸ್ಥಾಪಿಸಬೇಕು, ಅಗತ್ಯ ಬಿದ್ದರೆ ಕದ್ದಾಲಿಕೆಗೆ ಅವಕಾಶ ನೀಡಬೇಕೆಂಬ ಕಠಿಣ ನಿಯಮಗಳನ್ನು ಸರ್ಕಾರ ಸ್ಟಾರ್ ಲಿಂಕ್ ಗೆ ಹಾಕಿದೆ ಎನ್ನಲಾಗಿದೆ. ಈ ಹಿಂದೆ ಸಾಮಾಜಿಕ ಜಾಲತಾಣಗಳ ಮೇಲೂ ಇಂಥ ನಿಯಮ ಹೇರಿದಾಗ ಅವು ಈ ಬಗ್ಗೆ ಕಳವಳ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದವು. ಹೀಗಾಗಿ ಸ್ಟಾರ್ ಲಿಂಕ್ ವಿಷಯದಲ್ಲಿ ಹೀಗಾಗದಂತೆ ಸರ್ಕಾರ ಮೊದಲೇ ಜಾಗೃತೆ ವಹಿಸಬೇಕು. ರಾಷ್ಟ್ರೀಯ ಭದ್ರತೆ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆಯಾಗಿರಬೇಕು. ಸ್ಟಾರ್ ಲಿಂಕ್ ಗೆ ಭಾರತದಲ್ಲಿ ಅವಕಾಶ ಸಿಕ್ಕರೂ ಅದರ ಮೂಗುದಾರ ತನ್ನ ಬಳಿಯೇ ಇಟ್ಟುಕೊಳ್ಳುವ ನಿಯಮಗಳನ್ನು ಸರ್ಕಾರ ಜಾರಿಗೊಳಿಸಬೇಕು. ಇಲ್ಲದೇ ಹೋದಲ್ಲಿ ತಂತ್ರಜ್ಞಾನದ ದುರ್ಬಳಕೆಯ ಅಪಾಯ ಸರ್ಕಾರವನ್ನು ಕಾಡಲಿದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೫-೦೩-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ