ಸ್ಟೇಟಸ್ ಕತೆಗಳು (ಭಾಗ ೧೦೦೦)- ಬಟ್ಟೆ

ಸ್ಟೇಟಸ್ ಕತೆಗಳು (ಭಾಗ ೧೦೦೦)- ಬಟ್ಟೆ

ನಾಲ್ಕು ರಸ್ತೆ ಕೊಡುವಲ್ಲಿ, ವಾಹನಗಳ ಓಡಾಟ ಜೋರಾಗಿದೆ. ಅಲ್ಲಿ ನಿಂತ ಪೊಲೀಸರಿಗೆ ಅವುಗಳನ್ನು ನಿಯಂತ್ರಿಸುವುದೇ ಪ್ರತಿದಿನದ ಕೆಲಸ. ದೊಡ್ಡ ದೊಡ್ಡವರ ದೊಡ್ಡ ಗಾಡಿಗಳು ಅಲ್ಲಿ ಒಂದು ಕ್ಷಣ ನಿಂತು ಮುಂದುವರೆಯುತ್ತದೆ. ಆ ನಿಂತ ಕ್ಷಣದಲ್ಲಿ ಅಂದಿನ ದಿನವನ್ನು ದೂಡುವ ಕೆಲಸವನ್ನು ಬಟ್ಟೆ ಮಾರುವವರು ನಿರ್ವಹಿಸುತ್ತಾರೆ. ಅಲ್ಲಿ ಒಂದಷ್ಟು ಜನ  ಗಾಡಿ ಒರೆಸುವ ಬಟ್ಟೆಗಳನ್ನ ಮಾರಾಟ ಮಾಡುತ್ತಾ ಅಕ್ಕ ಪಕ್ಕದಲ್ಲಿ ಓಡಾಡುತ್ತಿರುತ್ತಾರೆ. ರಾಜೀವನ ಗಾಡಿ ಅಲ್ಲಿ ಒಂದು ಕ್ಷಣ ನಿಂತಿತು. ಆತನಿಗೆ ನಿಗದಿಯಾಗಿದ್ದ ಕೆಲಸ ಒಂದನ್ನು ಕೊನೆ ಕ್ಷಣದಲ್ಲಿ ಇನ್ಯಾರಿಗೂ ನೀಡಿಬಿಟ್ಟಿದ್ದರು. ಆತ ಆ ನೋವಿನಲ್ಲಿ ನತಮಸ್ತಕನಾಗಿ ಗಾಡಿ ಚಲಾಯಿಸ್ತಾ ಇದ್ದ. ಮುಂದೇನು ಅನ್ನುವ ಯೋಚನೆಯಲ್ಲಿದ್ದವನಿಗೆ ತನ್ನ ಗಾಡಿಯ ಕಿಟಕಿಯನ್ನು ಬಡಿಯುತ್ತಿದ್ದ ಬಟ್ಟೆ ಮಾರುವ ಕಂಡ. ಬೇಡ ಎಂದು ಎರಡು ಸಲ ಹೇಳಿದರೂ ಆತ ಮೂರನೇ ಸಲ ಬಾಗಿಲು ಬಡಿದ ಇನ್ನೇನು ಆತನನ್ನ ಏರು ಧ್ವನಿಯಲ್ಲಿ ವಾಪಾಸು ಕಳಿಸಬೇಕೆನ್ನುವಷ್ಟರಲ್ಲಿ ಆತ ಇವನ ಗಾಡಿಯನ್ನು ದಾಟಿ ಮುಂದಿನ ಎರಡು ಗಾಡಿಗಳ ಕಿಟಕಿಗಳನ್ನ ಬಡಿದು ಬಟ್ಟೆಗಳನ್ನ ಮಾರಾಟ ಮಾಡಿದ್ದ. ಆಗ ರಾಜೀವನ ತಲೆಯೊಳಗೆ ಓಡಿದ ಯೋಚನೆಯೇ ಅವನ ಬದುಕನ್ನ ಬದಲಿಸಿತು. ಕೇವಲ ಒಂದೇ ಅವಕಾಶಕ್ಕಾಗಿ ಮತ್ತೆ ಅಲ್ಲಿ ನಿಂತು ಕಾಯುವುದಕ್ಕಿಂತ ತನ್ನ ಬದುಕು ಬದಲಿಸುವ ಅವಕಾಶಕ್ಕೆ ಹುಡುಕಿ ಹೊರಡಬೇಕು. ಬಟ್ಟೆ ಮಾರುವ ಮುಂದೆ ಹೋದಹಾಗೆ ತಾನು ಕಳೆದುಹೋದ ಕ್ಷಣವನ್ನು ಚಿಂತಿಸುತ್ತ ಕಾಯುವುದರ ಬದಲು ಹೊಸ ಅವಕಾಶವನ್ನು ಹುಡುಕುವುದು  ಒಳಿತೆಂದು ನಿರ್ಧರಿಸಿ, ಗಾಡಿಯ ವೇಗ ಹೆಚ್ಚಿಸಿದ. ಮನಸ್ಸು ನಿರಾಳವಾಗಿತ್ತು .ಬಟ್ಟೆ ಮಾರುವವ ಜೀವನ ಬದಲಿಸುವ ಪಾಠ ಕಲಿಸಿದ್ದ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ