ಸ್ಟೇಟಸ್ ಕತೆಗಳು (ಭಾಗ ೧೦೦೧)- ಮೂಲ
ವಾಸನೆ ಹೆಚ್ಚಾಗುತ್ತಿದೆ. ಸಹಿಸಿಕೊಳ್ಳಲಾಗುತ್ತಿಲ್ಲ. ಇದು ಇತ್ತೀಚಿನವರೆಗೆ ಏನು ಇರಲಿಲ್ಲ. ಮೊನ್ನೆ ಮೊನ್ನೆ ಮನೆಗೆ ಒಂದಷ್ಟು ನೆಂಟರು ಬಂದಿದ್ದರು, ಅವತ್ತಿಂದಲೇ ಈ ವಾಸನೆ ಆರಂಭವಾಗಿದೆ. ಅವರು ನಮ್ಮ ಮನೆಯಲ್ಲಿ ಜಾಂಡ ಊರಿ ಬಿಟ್ಟಿದ್ದಾರೆ. ಅವರಿಂದ ಈ ವಾಸನೆ ಬರ್ತಾ ಇದೆಯೋ ಗೊತ್ತಿಲ್ಲ. ಅದಲ್ಲದೆ ಪಕ್ಕದ ಮನೆಯಲ್ಲಿ ಹೊಸದಾಗಿ ಬಾಡಿಗೆ ಬಂದವರು ನಿನ್ನೆ ತಾನೇ ಗೃಹಪ್ರವೇಶ ಮಾಡಿಕೊಂಡಿದ್ದಾರೆ. ಅಂದಿನಿಂದ ಈ ವಾಸನೆ ಆರಂಭವಾಗಿರೋದು. ಒಂದಾದರೆ ನನ್ನ ಮನೆಗೆ ಬಂದ ನೆಂಟರಿಷ್ಟರಿಂದ ಅಥವಾ ಪಕ್ಕದ ಮನೆಯವರಿಂದ ಈ ವಾಸನೆ. ನೆಂಟರು ಮನೆ ಬಿಟ್ಟು ಹೋದರು ವಾಸನೆ ನಿಲ್ಲುತ್ತಿಲ್ಲ. ಪಕ್ಕದ ಮನೆಯವರು ಹಾಗೆ ಉಳಿದುಕೊಂಡಿದ್ದಾರೆ ಈ ವಿಷಯವನ್ನು ಇಡೀ ಊರಲ್ಲಿ ಹೇಳಿದ್ದಾಯಿತು. ಪ್ರತಿಯೊಬ್ಬರಿಗೂ ಬಾಡಿಗೆ ಮನೆಯವರ ಎಲ್ಲ ಕಥೆಗಳನ್ನು ವಾಸನೆಯ ವಿವರಣೆಗಳನ್ನು ನೀಡಿದ್ದಾಯಿತು. ಆದರೂ ವಾಸನೆ ಹೋಗುತ್ತಿಲ್ಲ. ಕೆಲವು ಸಮಯದ ನಂತರ ಬಾಡಿಗೆ ಮನೆಯವರು ಬೇರಲ್ಲೂ ಹೋಗಿಬಿಟ್ಟರು. ಆದರೂ ವಾಸನೆ ಹೋಗ್ಲಿಲ್ಲ. ಅವತ್ತು ನನ್ನ ಮನೆಯನ್ನು ಸರಿಯಾಗಿ ಹುಡುಕೋದಕ್ಕೆ ಪ್ರಾರಂಭ ಮಾಡಿದೆ ,ಅಟ್ಟದ ಮೇಲೆ ಒಂದೆರಡು ಇಲಿಗಳು ಸತ್ತು ಬಿದ್ದಿದ್ದವು. ನನಗೆ ಇಷ್ಟು ದಿನ ಇದು ಗಮನಕ್ಕೆ ಬಂದಿರಲಿಲ್ಲ. ಈ ವಾಸನೆ ನನ್ನ ಸುತ್ತಮುತ್ತಲಿನವರಿಂದ ಅಥವಾ ಅಲ್ಲಿ ಇಲ್ಲಿ ಓಡಾಡೋದ್ರಿಂದ ಅಂದುಕೊಂಡಿದ್ದೆ, ನನ್ನ ಮನೆಯಲ್ಲಿ ಇಷ್ಟೊಂದು ವಾಸನೆ ಹುಟ್ಟುವ ಸ್ಥಳವಿದೆ ಅಂತ ನಾನು ಯೋಚನೆ ಮಾಡಿರಲಿಲ್ಲ. ಅದಕ್ಕೆ ಅವತ್ತು ಆ ಇಲಿಗಳನ್ನ ಹೊರಗಡೆ ಬಿಸಾಡಿ ಮನೆ ಸ್ವಲ್ಪ ಸ್ವಚ್ಛ ಮಾಡಿ ನೆಮ್ಮದಿಯಾಗಿಬಿಟ್ಟೆ .ಅವತ್ತು ಅರ್ಥ ಆಯಿತು ಕೆಲವೊಂದು ಸಮಸ್ಯೆಗಳು ನಮ್ಮೊಳಗಿಂದಲೇ ಆರಂಭವಾಗುತ್ತೆ ಅದಕ್ಕೆ ಪರಿಹಾರವನ್ನ ನಮ್ಮೊಳಗೆ ಹುಡುಕಬೇಕು ಅಕ್ಕಪಕ್ಕದಲ್ಲಲ್ಲ ಅಂತ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ