ಸ್ಟೇಟಸ್ ಕತೆಗಳು (ಭಾಗ ೧೦೦೨)- ಸಣ್ಣತನ

ಸ್ಟೇಟಸ್ ಕತೆಗಳು (ಭಾಗ ೧೦೦೨)- ಸಣ್ಣತನ

ದೊಡ್ಡವರು ಯಾವತ್ತು ದೊಡ್ಡವರಾಗಿರಬೇಕು. ಸಣ್ಣವರಾಗೋಕೆ ಪ್ರಯತ್ನಿಸಬಾರದು.ಸಣ್ಣವರೂ ಕೂಡ ದೊಡ್ಡತನವನ್ನು ಆಗಾಗ ತೋರಿಸಬೇಕು. ದೊಡ್ಡವರು ಸಣ್ಣವರು ಆಗಿಬಿಟ್ಟರೆ ಅವರ ಇಷ್ಟು ದಿನದ ಪರಿಶ್ರಮಕ್ಕೆ ಅರ್ಥ ಇರೋದಿಲ್ಲ. ಅವರ ಜೀವನ ಸಾಗಿಸೋಕೆ ಇನ್ನೊಬ್ಬರ ಜೀವನವಲ್ಲ ಬಲಿ ತೆಗೆದುಕೊಳ್ಳುವ ದೊಡ್ಡತನ ಅದು ಶಾಶ್ವತವಾದದ್ದಲ್ಲ. ನೀವು ಜೂಜಾಟವಾಡಿದ್ರೆ ಹಣ ಮಾಡಬಹುದು, ಈ ವಸ್ತುವನ್ನು ಖರೀದಿಸಿದರೆ ನಿಮ್ಮ ಬದುಕು ಈ ರೀತಿ ಬದಲಾಗಬಹುದು, ಅನ್ನುವ ಹುಚ್ಚು ಭರವಸೆಗಳು, ನೀವಿದನ್ನ ತಿಂದ್ರೆ ಅದ್ಭುತವಾಗಿ ಕಾಣಿಸ್ತೀರಾ, ಇದನ್ನು ಕುಡಿದರೆ ಹೆಚ್ಚು ಶಕ್ತಿವಂತರಾಗ್ತೀರಾ, ನಿಮ್ಮ ದೇಹದೊಳಗೆ ಇನ್ನೊಂದಷ್ಟು ಹೆಚ್ಚು ಶಕ್ತಿ ತುಂಬಿಕೊಳ್ಳುತ್ತದೆ ಅನ್ನುವ ಮೋಸದ ಮಾತುಗಳನ್ನಾಡುವ ಮೊದಲು ಯಾರ ಜೀವನವನ್ನ ಹಾಳು ಮಾಡ್ತಾ ಇದ್ದೇವೆ ಅನ್ನೋದ್ದನ್ನ ಅರ್ಥ ಮಾಡಿಕೊಳ್ಳಬೇಕು. ತಿಳಿದವರು ಹೇಳ್ತಾರೆ ನೀವ್ಯಾಕೆ ದೊಡ್ಡವರ ಮಾತುಗಳನ್ನ ಕೇಳುತ್ತೀರಿ? ಅಂತ ಆದರೆ ದೊಡ್ಡವರನ್ನ ಹಲವು ಜನ ಆರಾಧಿಸುತ್ತಿರುತ್ತಾರೆ, ಅವರ ಜೀವನವನ್ನು ಅನುಸರಿಸ್ತಾ ಇರ್ತಾರೆ. ನಮ್ಮನ್ನ ನಮ್ಮ ಮಕ್ಕಳು ನೋಡಿ ಅನುಸರಿಸುವ ಹಾಗೆ ಕೆಲವೊಂದಷ್ಟು ದೊಡ್ಡವರನ್ನ ಹಲವು ಮಂದಿ ಹಾಗೆ ಬದುಕಬೇಕು ಅಂತ ಅಂದುಕೊಂಡಿರುತ್ತಾರೆ. ಅವಾಗ ಅವರು ಹೇಳುವ ಮಾತುಗಳು ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಹಾಗಾಗಿ ದೊಡ್ಡವರು ದೊಡ್ಡತನವನ್ನು ಮೆರೆಯಬೇಕು. ಯಾರದೋ ಜೀವನವನ್ನ ಮತ್ತೆ ಪಾತಾಳಕ್ಕೆ ತಲುಪಿಸುವ ಯೋಚನೆಗಳಲ್ಲ. ನಮಸ್ಕಾರ. ಹೀಗೆಂದವ ಅಲ್ಲಿಂದ ಹೊರಟ. ಈ ವಿಷಯ ಯಾರಿಗೆ ತಲುಪಬೇಕು ಗೊತ್ತಾಗ್ಲೇ ಇಲ್ಲ. ಅದಕ್ಕೆ ಹೀಗೆ ಬರೆದು ಬಿಟ್ಟಿದ್ದೇನೆ. ಇದು ಯಾರಿಗೆ ತಲುಪಬೇಕು ಅನ್ನೋದು ನಿಮಗೆ ಗೊತ್ತಿದ್ದರೆ ತಲುಪಿಸಿಬಿಡಿ. ಒಂದಷ್ಟು ಬದಲಾವಣೆಗಳು ಆಗುವುದಿದ್ದರೆ ಆಗಲಿ ಬಿಡಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ