ಸ್ಟೇಟಸ್ ಕತೆಗಳು (ಭಾಗ ೧೦೦೫)- ಪಾಠ

ಸ್ಟೇಟಸ್ ಕತೆಗಳು (ಭಾಗ ೧೦೦೫)- ಪಾಠ

ಬದುಕು ನಮಗೆ ಒಬ್ಬರನ್ನ ಪರಿಚಯ ಮಾಡಿಕೊಡುತ್ತಾ ಹೋಗುತ್ತೆ. ಅದು ನಮ್ಮ ಬದುಕಿಗೊಂದು ಪಾಠವನ್ನು ಹೇಳಿಕೊಡುತ್ತದೆ. ಅವತ್ತು ಜೋರು ಮಳೆ ಬರ್ತಾ ಇತ್ತು ಅಂತ ಮುಲ್ಕಿಯ ಬಸ್ ಸ್ಟ್ಯಾಂಡಿನ ಪಕ್ಕದಲ್ಲಿರುವ ಪುಟ್ಟ ಅಂಗಡಿಯ ಬಳಿ ನಿಂತೆ. ಅಲ್ಲೇ ಸಣ್ಣದೊಂದು ಅಂಗಡಿ ತಿನ್ನೋದಕ್ಕೆ ಅಂತ ಒಂದಷ್ಟು ತಿಂಡಿಗಳನ್ನ ಅವರೊಬ್ಬರು ಅಮ್ಮ ತಯಾರಿಸುತ್ತಿದ್ದರು. ಮಳೆ ಬರ್ತಾ ಇತ್ತು ಅವರ ಜೊತೆಗೆ ಬೇರೆ ಯಾರು ಇರಲಿಲ್ಲ ಹಾಗಾಗಿ ಮಾತುಕತೆಗೆ ಇಳಿದುಬಿಟ್ಟೆ. ತುಂಬಾ ಪ್ರೀತಿಯ ಕುಟುಂಬ ಎರಡು ಜನ ಮಕ್ಕಳು ಮತ್ತು ಪ್ರೀತಿಸುವ ಗಂಡ ಬದುಕು ತುಂಬಾ ಚೆನ್ನಾಗಿ ಹೋಗ್ತಾ ಇತ್ತು. ಇಂತಹ ಅದ್ಭುತ ಬದುಕು ಕೊಟ್ಟದ್ದಕ್ಕೆ ದೇವರಿಗೆ ಪ್ರತಿದಿನ ಧನ್ಯವಾದ ಹೇಳುತ್ತಾ ಇದ್ರು. ಆದ್ರೂ ಆ ದೇವ್ರು ಒಂದು ಸಲ ತಂದೆ ಮತ್ತು ಮಕ್ಕಳನ್ನ ಕರ್ಕೊಂಡೆ ಬಿಟ್ರು. ಜೋರು ಮಳೆಯಲ್ಲಿ ನಡೆದು ಬರುತ್ತಿರುವಾಗ ಸಿಡಿಲು ಬಡಿದು ಮೂರು ಜನರೂ ಉಸಿರು ನಿಲ್ಲಿಸಿದ್ದರು. ಅಷ್ಟು ದಿನದವರೆಗೆ ಮುಂದಿನ ಬದುಕು ಹೇಗೆ ಅನ್ನುವ ಯೋಚನೆ ಅವರಲ್ಲಿ ಇರ್ಲಿಲ್ಲ. ಆದರೆ ಇನ್ನು ಮುಂದೆ ಬದುಕಬೇಕಿತ್ತು, ಯಾರದೋ ಹಂಗಿನಲ್ಲಿ ಬದುಕುವ ಇಚ್ಛೆಯವರದಲ್ಲ. ಅದಕ್ಕಾಗಿ ನಾಲ್ಕು ಕಂಬಗಳ ನಡುವಿನ ಪುಟ್ಟ ಅಂಗಡಿಯೊಂದನ್ನ ಆರಂಭಿಸಿದ್ರು. ಅಂದಿನಿಂದ ಇಂದಿನವರೆಗೆ ಹೋಗಿ ಬರುವ ಪ್ರತಿಯೊಬ್ಬರು ಕೂಡ ತುಂಬಾ ಪ್ರೀತಿಯಿಂದ ಮಾತನಾಡುತ್ತಾರೆ. ಬದುಕು ಸಾಗಿಸೋಕೆ ಏನು ಬೇಕು ಎಲ್ಲ ಇಲ್ಲಿ ಸಿಕ್ತಾ ಇದೆ. ಕನಸುಗಳು ನೆರವೇರ್ತಾ ಇದೆ. ಬದುಕು ಇನ್ನೊಂದು ಹಂತವನ್ನು ತಲುಪಿದೆ. ಬದುಕು ನಮಗೆ ಕಲಿಸುವುದಕ್ಕೆ ಕಾಯ್ತಾನೆ ಇರುತ್ತೆ ಆದರೆ ನಾವು ಅದರ ಜೊತೆಗೆ ಸಾಗಬೇಕಷ್ಟೇ. ಮಳೆ ನಿಂತಿತ್ತು ಅವರ ಮಾತು ಕೂಡ. ಮನೆಯಲ್ಲಿ ಅಮ್ಮ ಬೈದಿದ್ದಕ್ಕೆ ಸಿಟ್ಟು ಮಾಡಿಕೊಂಡ ನನಗೆ ಆ ಸಿಟ್ಟಿಗೆ ಅರ್ಥ ಇಲ್ಲ ಅಂತ ಕ್ಷಣದಲ್ಲಿ ಪರಿಚಯ ಆಗಿ ಹೋಯಿತು ಅಲ್ಲಿಂದಲೇ ನಾಲ್ಕು ಬೋಂಡಾ ಬಜ್ಜಿ ಕಟ್ಟಿಕೊಂಡು ವಾಪಸು ಮನೆ ಕಡೆಗೆ ನಡೆದುಬಿಟ್ಟೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ