ಸ್ಟೇಟಸ್ ಕತೆಗಳು (ಭಾಗ ೧೦೦೮)- ಪ್ರಶ್ನೆ

ಸ್ಟೇಟಸ್ ಕತೆಗಳು (ಭಾಗ ೧೦೦೮)- ಪ್ರಶ್ನೆ

ಅಮ್ಮ ನನಗೆ ಯಾಕೆ ಬೈಯ್ಯುತ್ತಾ ಇದ್ದೀಯ ನಾನೇನ್ ತಪ್ಪು ಮಾಡಿದ್ದೇನೆ? ನಿನ್ನೆ ತಾನೆ ನೀನು ಟಿವಿಯಲ್ಲಿ ನೋಡಬೇಕಿತ್ತು, ಅದು ಯಾವುದೋ ಕಾರ್ಯಕ್ರಮದಲ್ಲಿ ಒಬ್ಬಳು ಹುಡುಗಿ ವೇದಿಕೆ ಮೇಲೆ ತನ್ನ ದೇಹದಲ್ಲಿದ್ದ ಬಟ್ಟೆ ಬಿಚ್ಚಿದಾಗ ಅಲ್ಲಿದ್ದವರೆಲ್ಲ ನಿಂತು ಚಪ್ಪಾಳೆ ಹೊಡೆದರು, ಯಾವುದೋ ಕಾರ್ಯಕ್ರಮದಲ್ಲಿ ಕಡಿಮೆ ಬಟ್ಟೆ ಹಾಕಿ ಕುಣಿದವರಿಗೆ ಹೆಚ್ಚು ಬಹುಮಾನವನ್ನು ಕೊಟ್ಟರು. ದೇಹ ತೋರಿಸುವುದು ಅದು ಸಾಧನೆ ಅಮ್ಮ. ಅವರು ಹೆಚ್ಚು ಹಣ ಸಂಪಾದಿಸುತ್ತಾರೆ, ಹೆಚ್ಚು ಹೆಸರು ಸಂಪಾದಿಸುತ್ತಾರೆ. ಅವರ ಜೀವನ ಅದ್ಭುತವಾಗಿರುತ್ತೆ. ಇಷ್ಟೆಲ್ಲ ನಮ್ಮ ಕಣ್ಣ ಮುಂದೆ ನಡಿತಾ ಇರುವಾಗ ನೀನು ಪ್ರತಿದಿನ ಮೈತುಂಬ ಬಟ್ಟೆ ಹಾಕು ಅಂತ ಹೇಳುವುದೆಷ್ಟು ಸರಿ. ನಾವು ಜೀವನದಲ್ಲಿ ಹೆಸರು ಮಾಡಬೇಕು ಎಲ್ಲರೂ ನಮ್ಮನ್ನು ಗುರುತಿಸಬೇಕು ಅಷ್ಟೇ ತಾನೇ, ಕಡಿಮೆ‌ ಬಟ್ಟೆ ಹಾಕುವುದು ಹೆಚ್ಚು ಗೌರವ ಕೊಡುತ್ತೆ. ಎಲ್ಲರೂ ಅವರನ್ನು ಆರಾಧಿಸುತ್ತಾರೆ. ಈಗ ನನ್ನದೇನು ತಪ್ಪು‌ನೀನು‌ ಹೇಳು?" ಹೀಗಂತ ತನ್ನ ಮಗಳ ಪ್ರಶ್ನೆಗೆ ಉತ್ತರಿಸಲಾಗದೆ ಜಾನಕಿ ಮೌನವಾಗಿ ಬಿಟ್ಟಳು. ಕೈಯಲ್ಲಿರುವ ಮೊಬೈಲ್ ಗೋಡೆಗೆ ನೇತು ಬಿದ್ದಿರುವ ಟಿವಿ ತೋರಿಸುವ ಸತ್ಯವನ್ನ ಅದು ಭ್ರಮೆ ಎಂದು ಅವಳಿಗೆ ಹೇಗೆ ತಿರುಗಿಸಿ ಹೇಳಲಿ ಎಂದು ಅರ್ಥವಾಗದೆ ಯಾವುದೋ ಕೆಲಸದಲ್ಲಿ ಮುಳುಗಿಬಿಟ್ಟಳು. ಮಗಳು ಇನ್ನೂ ಕೂಡ ಅದೇ ಪ್ರಶ್ನೆಯ ಗುಂಗಿನಲ್ಲಿದ್ದಾಳೆ. ಅವಳ ಮಗಳಿಗೆ ಉತ್ತರವೇನು ಕೊಡುವುದೆಂದು ತಿಳಿಯದೆ ಜಾನಕಿ ಸುಮ್ಮನಾಗಿದ್ದಾಳೆ, ನೀವಾದರೂ ಉತ್ತರ ತಿಳಿಸುವಿರಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ