ಸ್ಟೇಟಸ್ ಕತೆಗಳು (ಭಾಗ ೧೦೦೯)- ಆಶಾ ಕಾರ್ಯಕರ್ತೆ

ಸ್ಟೇಟಸ್ ಕತೆಗಳು (ಭಾಗ ೧೦೦೯)- ಆಶಾ ಕಾರ್ಯಕರ್ತೆ

ಇನ್ನೂ ಸ್ವಲ್ಪ ಹೊತ್ತು ಕುಳಿತುಕೊಳ್ಳಿ ಅವಸರ ಯಾಕೆ? ಎಷ್ಟು ಹೇಳಿದರೂ ಲಲಿತಕ್ಕ ಹೊರಡುವುದ್ದಕ್ಕೆ ತಯಾರಾದರು. ಅವರದ್ದು ಆಶಾ ಕಾರ್ಯಕರ್ತೆ ಕೆಲಸ. ತನ್ನೂರಿನ ಆಗು ಹೋಗುಗಳ ಜೊತೆ ಆರೋಗ್ಯ ವಿಚಾರಿಸಲೇ ಬೇಕು. ಮಳೆ ಬಿಸಿಲು ಅಂತ ಸುಮ್ಮನೆ ಕೂರುವ ಹಾಗಿಲ್ಲ. ಓದಿದ್ದೇನು ದೊಡ್ಡದ್ದಲ್ಲ ಆದರೆ ಈ ಕೆಲಸ ಕೈ ಹಿಡಿಯಿತು. ಸರಕಾರ ಇವರ ಕೆಲಸಕ್ಕೆ ತಕ್ಕ ರೀತಿಯಲ್ಲಿ ಗೌರವ ಮತ್ತು ಸಂಭಾವನೆ ಕೊಡ್ತಿಲ್ಲ ಅನ್ನೋದು ಬೇಸರದ ಸಂಗತಿ. ಹಲವು ಬಾರಿ ಪ್ರತಿಭಟನೆ ಮಾಡಿದರೂ ಸಹ ಯಾರೂ ಕಿಮ್ಮತ್ತೂ ಕೊಡ್ತಿಲ್ಲ. ಸರಕಾರಕ್ಕೆ ಉಳಿದ ವಿಚಾರಗಳಿಗೆ ದುಡ್ಡು ಸುರಿಯುವುದ್ದಕ್ಕೆ ಸಮಯ ಸಿಗುತ್ತೆ ನಿಜದ ದುಡಿಮೆಯ ಕಡೆಗೆ ಗಮನವೇ ಕೊಡುತ್ತಿಲ್ಲ. ಕಾಲು ನೋವಾಗುತ್ತೆ. ಸರ್, ಇಡೀ ದಿನ ಸುಸ್ತಾಗಿ ಮನೆ ತಲುಪಿದರೆ ಮತ್ತೆ  ದುಡಿಯಲೇ ಬೇಕು ಕುಟುಂಬದ ನೆಮ್ಮದಿಗೆ. ಉಳಿದವರ ಆರೋಗ್ಯ ವಿಚಾರಿಸೋ ನಮಗೆ ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವವರು ಯಾರೂ ಇಲ್ಲದೆ ಮೌನವಾಗಿದ್ದೇವೆ .ಕೆಲಸದ ಮೇಲೆ ಪ್ರೀತಿ ಇದೆ. ಸಮಾಜದ ಜೊತೆಗೆ ಸರಕಾರವೂ ನಮ್ಮನ್ನ ಗಮನಿಸಿದರೆ ಇನ್ನಷ್ಟು ಹುಮ್ಮಸ್ಸು ಸಿಗುತ್ತೆ. ಆಗಾಗ ಹೇಳುವ ಬಡಾಯಿ ಮಾತುಗಳು ನಮ್ಮನ್ನ ಕಾಪಾಡಲ್ಲ. ಒಂದು ಕ್ಷಣವಾದರೂ ನಮ್ಮ ಹಿತ ಕಾಪಾಡುವ ಯೋಜನೆಗಳು ಬರಲಿ ಸಾರ್. ಎಷ್ಟು ಮಾತಾಡಿದರೂ ಏನು ಪ್ರಯೋಜನ.. ಕೇಳುವವರಿಗೆ ಇದು ಕೇಳಿಸುವುದೇ ಇಲ್ಲ. ಬರ್ತೇನೆ ಸರ್. ಸರೋಜಕ್ಕನ ಸೊಸೆಗೆ ಮದ್ದು ಕೊಡೋದಿದೆ. ಲಲಿತಕ್ಕ ಹೊರಟು ಹೋದರು. ಅವರ ಮಾತುಗಳು ನನ್ನಲ್ಲೇ ಉಳಿದವು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ