ಸ್ಟೇಟಸ್ ಕತೆಗಳು (ಭಾಗ ೧೦೦) - ನೆನಪು
ಕಳೆದುಕೊಂಡಲ್ಲಿ ಹುಡುಕಬೇಕು ದೊಡ್ಡೋರು ಈ ಮಾತನ್ನು ಹೇಳಿದ್ದಾರೆ. ಆದರೆ ನನಗೆ ಎಲ್ಲಿ ಕಳೆದುಕೊಂಡೆ ಅನ್ನೋದೇ ಗೊತ್ತಾಗುತ್ತಿಲ್ಲ. ಅಲ್ಲೊಂದು ನಮ್ಮೂರಿನ ಹಳೆ ದೇವಾಲಯದ ಗೋಪುರದ ಮೇಲೆ ದೊಡ್ಡ ದೊಡ್ಡ ಕಲ್ಲು ಇಟ್ಟು ಕೆತ್ತನೆ ಮಾಡಿದ್ದಾರೆ, ಆಗ ಯಂತ್ರ ಇರಲಿಲ್ಲ. ಜೋರು ಜ್ವರಕ್ಕೆ ಮದ್ದು ಅರೆಯುತ್ತಿದ್ದದ್ದು ಅಜ್ಜಿಯ ಕೈಗಳು, ಸಣ್ಣ ಬಾವಿ ತೆಗೆದರೂ ನೀರು ಜಿನುಗುತ್ತಿತ್ತು. ಹಸಿರು ಅಲ್ಲಲ್ಲಿ ಸುಳಿದಾಡುವ ತಣ್ಣನೆಯ ಗಾಳಿ ನೀಡುತ್ತಿತ್ತು, ಸಣ್ಣ ಮನೆಯೊಳಗೆ ದೊಡ್ಡ ಮನಸ್ಸುಗಳು ಕೂತು ಮಾತನಾಡುತ್ತಿದ್ದವು, ಪ್ರತಿಯೊಂದಕ್ಕೂ ಎಲ್ಲರಿಗೂ ಸಮಯ ಸಿಗುತ್ತಿತ್ತು, ಗದ್ದೆಯಲ್ಲಿ ಕೆಸರು ತುಂಬಿದ ಕಾಲುಗಳು, ಬೆವರು ಹರಿಸುವ ಹಣೆಗಳು ಕಾಣುತ್ತಿದ್ದವು, ಉರೂಸು, ಕ್ರಿಸ್ಮಸ್ ಗಳು ಎಲ್ಲರ ಮನೆಯ ಹಬ್ಬವಾಗುತ್ತಿತ್ತು. ರಾಜಕೀಯಕ್ಕೊಂದು ಧರ್ಮವಿತ್ತು, ಕಸದತೊಟ್ಟಿಯಲ್ಲಿ ಅನ್ನ ಕಾಣುತ್ತಿರಲಿಲ್ಲ, ಅಜ್ಜನ ಬಾಯಿಯಲ್ಲಿ ಒಂದಷ್ಟು ಕಥೆಗಳು ಇರುತ್ತಿತ್ತು, ಪ್ರೀತಿ ಹಂಚಿಕೆಯಾಗಿ ಉಳಿಕೆಯಾಗುತ್ತಿತ್ತು, ಅಣೆಕಟ್ಟುಗಳು ಗಟ್ಟಿಯಾಗಿ ನಿಂತಿದ್ದವು, ವಯಸ್ಸು ನೂರು ದಾಟುತ್ತಿತ್ತು, ಇದರ ಜೊತೆ ಹಲವಾರಿದೆ. ಎಲ್ಲಿ ಕಳೆದುಕೊಂಡೆ ಅನ್ನೋದೆ ಗೊತ್ತಾಗ್ತಿಲ್ಲ? ಯಾರಲ್ಲಿ ಕೇಳಲಿ? ನಾ ಕಳೆದುಕೊಂಡೆನಾ ಅಥವಾ ಕಳೆದುಹೋದೆನಾ? ದಯಮಾಡಿ ತಿಳಿಸಿ. ನನಗೊಂದು ತುಂಬಾ ಅಗತ್ಯವಾದದ್ದು ನೀವು ನೆನಪಿಸಲೇಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ