ಸ್ಟೇಟಸ್ ಕತೆಗಳು (ಭಾಗ ೧೦೧೧)- ಯಾವಾಗ?

ಸ್ಟೇಟಸ್ ಕತೆಗಳು (ಭಾಗ ೧೦೧೧)- ಯಾವಾಗ?

ಇನ್ನು ಯಾಕೆ ಶುರುವಾಗಿಲ್ಲ ಅಂತ ಯೋಚನೆ ಮಾಡ್ತಾ ಇದ್ದೆ? ಯಾಕೆಂದರೆ ನಮ್ಮಲ್ಲಿ ಯಾವುದೂ ಕೂಡ ಸಮಸ್ಯೆಯಾಗುವ ಮೊದಲೇ ಅದಕ್ಕೆ ತಕ್ಕ ಪರಿಹಾರವನ್ನು ಸೂಚಿಸುವುದಲ್ಲ, ಸಮಸ್ಯೆ ಆದ ಮೇಲೆ ಯಾವ ತರಹದ ಪರಿಹಾರ ಸೂಕ್ತ ಅಂತ ನಿರ್ಧರಿಸುವುದು. ಮೊನ್ನೆ ತಾನೆ ಮಳೆ ಜೋರಾಗಿ ವಿದ್ಯುತ್ ತಂತಿಯಿಂದ ಒಂದು ಹೆಣ್ಣು ಮಗು ಪ್ರಾಣ ಕಳೆದುಕೊಳ್ಳುತ್ತದೆ, ಈಗ ಅದಕ್ಕೆ ಪರಿಹಾರಾರ್ಥವಾಗಿ ವಿದ್ಯುತ್ ತಂತಿ ಕೆಲಸ ಆರಂಭವಾಗಿದೆ. ಊರಲ್ಲಿ ಸೇತುವೆ ಇಲ್ಲ ಅಂತ ಹೇಳಿ ಎಷ್ಟೇ ಜನ ಬೊಬ್ಬೆ ಹೊಡೆದರೂ ಯಾರೂ ಕೇಳುವುದಿಲ್ಲ, ಮಳೆಗಾಲದಲ್ಲಿ ಒಬ್ಬರ ಪ್ರಾಣ ಹೋದ್ಮೇಲೆ ಈಗ ಅದಕ್ಕೊಂದು ತಡೆಗೋಡೆಗೆ ಅಂತ ಕೆಲಸ ಆರಂಭ ಮಾಡಿದ್ದಾರೆ. ಮಳೆ ಹೆಚ್ಚಾದರೆ ರಸ್ತೆ ಸಮಸ್ಯೆ ಶುರು ಆಗುತ್ತೆ ಅಂತ ಎಷ್ಟು ಸಲ ಹೇಳಿದರೂ ಕೂಡ ಮಾತೇ ಕೇಳದವರು ಈಗ ಒಂದೆರಡು ಜನ ಆ ಹೊಂಡದಲ್ಲಿ ಬಿದ್ದು ಗಾಯ ಮಾಡಿಕೊಂಡಾಗ ಪರಿಹಾರ ಏನು ಮಾಡುವ? ಮುಂದಿನ ಮಳೆಗಾಲದ ಒಳಗೆ ಸರಿ ಮಾಡ್ತೇವೆ ಅಂತ ಮಾತನಾಡುತ್ತಾರೆ. ಇದು ನಮ್ಮಲ್ಲಿ ಮಾತ್ರ ಅಂತ ಅಂದುಕೊಳ್ಳುತ್ತೇನೆ. ಸಮಸ್ಯೆ ಆರಂಭವಾಗುವ ಮೊದಲು ಇದು ಯಾವುದನ್ನು ಸರಿಯಾಗಿ ಗಮನಿಸುವುದೇ ಇಲ್ಲ ಎಲ್ಲದಕ್ಕೂ ಒಂದು ಪರಿಹಾರ ಇದೆ. ಸಮಸ್ಯೆಯಿಂದ ತೊಂದರೆ ಅನುಭವಿಸಿ ಬದುಕೋ ಕಷ್ಟ ಅಂತ ಅಂದಾಗ ಪರಿಹಾರ ಹುಡುಕೋದು. ಮಳೆ ನೀರನ್ನು ಇಂಗುವ ಹಾಗೆ ಮಾಡಿಕೊಳ್ಳಿ ಎಂದು ಎಷ್ಟೇ ಬೊಬ್ಬೆ ಹೊಡೆದರು ಇವರು ಯಾರು ಕೇಳೋರಲ್ಲ. ಮುಂದಿನ ಬೇಸಿಗೆಕಾಲಕ್ಕೆ ಮಳೆ ನೀರು ಉಳಿಸುವ ತಿಳಿಸುವುದರ ಬಗ್ಗೆ ಕಾರ್ಯಕ್ರಮವನ್ನ ಮಾಡೋದಿಕ್ಕೆ ಓಡಾಡ್ತಾ ಇರುತ್ತಾರೆ. ನಿಮಗಿದ್ಯಾವತ್ತು ಅರ್ಥ ಆಗುತ್ತೋ  ಹೀಗಂದ ರಮೇಶ್ ಮೇಷ್ಟ್ರು ಇನ್ನೊಂದಷ್ಟು ಜನರಿಗೆ ವಿಚಾರ ತಿಳಿಸುವುದಕ್ಕೆ ಪಕ್ಕದ ಊರಿಗೆ ಹೋದರು... ಅವರು ತಿಳಿಸ್ತಾ ಇದ್ದಾರೆ ನಾವು ಅರ್ಥ ಮಾಡಿಕೊಂಡಿಲ್ಲ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ