ಸ್ಟೇಟಸ್ ಕತೆಗಳು (ಭಾಗ ೧೦೧೩)- ಪಂದ್ಯಾಟ

ಸ್ಟೇಟಸ್ ಕತೆಗಳು (ಭಾಗ ೧೦೧೩)- ಪಂದ್ಯಾಟ

ಜೀವನ ನಾವು ಯೋಚಿಸಿದ ಹಾಗೆ ನಡೆಯೋಲ್ಲ. ಕ್ಷಣಕ್ಷಣವು ತಿರುವುಗಳನ್ನ ಕೊಡ್ತಾ ಇರುತ್ತೆ. ಅದ್ಭುತಗಳನ್ನು ಸೃಷ್ಟಿಸುತ್ತದೆ. ಆತಂಕಗಳನ್ನು ಹುಟ್ಟಿಸುತ್ತೆ, ನಂಬಿಕೆಯನ್ನು ಬಲಪಡಿಸುತ್ತೆ. ಎಲ್ಲದಕ್ಕೂ ಪ್ರತಿ ಕ್ಷಣವೂ ನೀನು ಹೊರಾಡಬೇಕು. ಇದೇ ಮಾತನ್ನು ಸಿಕ್ಕದಾಗಲೆಲ್ಲ ನಮ್ಮ ಗಣಿತದ ಮೇಷ್ಟ್ರು ಹೇಳ್ತಾ ಇದ್ದರು. ಇವತ್ತು ಸಿಕ್ಕಿದವರು,  ನಿನ್ನೆ ವಿಶ್ವ ಕಪ್ ಪಂದ್ಯಾಟವನ್ನು ನೀನು ನೋಡಿರಬಹುದು, ಆರಂಭವನ್ನ ನೋಡಿದಾಗ ನಾವು ಹೆಚ್ಚು ರನ್ ಹೊಡಿಯುತ್ತೇವೆ ಅಂತ ಅಂದುಕೊಂಡಿದ್ವಿ, ಆದರೆ ಅಲ್ಲಲ್ಲಿ ವಿಕೇಟ್ ಗಳು ಬೀಳಲಾರಂಬಿಸಿತು. ಆದರೂ ಒಂದಷ್ಟು ಮೊತ್ತವನ್ನು ಸೇರಿಸಿದ್ವಿ. ನಮ್ಮ ವಿರುದ್ಧ ಆಡ್ತಾ ಇದ್ದವರನ್ನು ಕಟ್ಟಿ ಹಾಕುತ್ತೇವೆ ಅಂತ ಅಂದುಕೊಂಡರೆ ಅವನ್ಯಾರೋ ಒಬ್ಬ ಬಂದು ಬಿಟ್ಟು ನಮ್ಮೆಲ್ಲರ ಊಹೆಗಳನ್ನು ತಿರುಗಿಸಿಬಿಟ್ಟ.  ನಾವು ಸೋಲಿನ ಕಡೆಗೆ ಮುಖ ಮಾಡಿದ್ವಿ. ಈ ಸಲವೂ ಸೋಲೇ ನಮಗೆ ಗತಿ ಅಂತ ಅಂದುಕೊಂಡಿದ್ವಿ. ಆದರೆ ಒಂದೆರಡು ಎಸತೆಗಳೇ ಚಿತ್ರಣವನ್ನೇ ಬದಲಿಸಿದವು. ಕೈ ತಪ್ಪಿ ಹೋಗುತ್ತಿದ್ದ ಚೆಂಡನ್ನ ಅದ್ಬುತವಾಗಿ ನಮ್ಮ ತಂಡದ ಒಬ್ಬ ಹಿಡಿದು ಗೆಲುವನ್ನು ಇನ್ನೂ ಹತ್ತಿರ ಮಾಡಿಬಿಟ್ಟ. ಎಲ್ಲರ ಪರಿಶ್ರಮದಿಂದ ಮತ್ತೆ ಗೆಲುವು ನಮ್ಮ ಕಡೆಗೆ ಸಿಕ್ತು. ಹಾಗೆ ಜೀವನ ಅನಿರೀಕ್ಷಿತ ತಿರುವುಗಳನ್ನು ಕೊಡ್ತಾ ಇರುತ್ತೆ .ಎಲ್ಲೂ ಕೂಡ ಉತ್ಸಾಹ ಕಳೆದುಕೊಳ್ಳಬಾರದು ಸತತ ಪರಿಶ್ರಮ ಪಡೆದು ಕೊನೆಯ ಕ್ಷಣದವರೆಗೂ ಹೋರಾಡಿದರೆ ಗೆಲುವು ನಿನಗೆ ಸಿಗುತ್ತೆ. ಈಗ ಅರ್ಥ ಆಯ್ತು ಅಂದುಕೊಳ್ಳುತ್ತೇನೆ. ಪ್ರತಿ ಸಲವೂ ಥಿಯರಿಯಲ್ಲಿ ಹೇಳ್ತಾ ಇದ್ದ ವಿಷಯವನ್ನು ಪಂದ್ಯಾಟವೊಂದು ಕಣ್ಣ ಮುಂದೆ ತಂದು ನಿಲ್ಲಿಸಿತು .ಜೀವನ ಎಷ್ಟು ಅದ್ಭುತ ಅಲ್ವಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ