ಸ್ಟೇಟಸ್ ಕತೆಗಳು (ಭಾಗ ೧೦೧೪)- ವೈದ್ಯ

ರಾಜಶೇಖರ ಊರಿನಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿರುವವ. ಹಲವಾರು ಸಮಯದಿಂದ ಊರಿಗೆ ದೇವರ ತರಹ ಇರುವವ. ಇವತ್ತು ಬೆಳಗ್ಗೆ ಅವನ ಮೊಬೈಲ್ ಮತ್ತೆ ಮತ್ತೆ ರಿಂಗಣಿಸುತ್ತಿದೆ. ತನ್ನ ಆಸ್ಪತ್ರೆಯಲ್ಲಿ ತುರ್ತು ಆರೋಗ್ಯಕ್ಕಾಗಿ ಕರೆ ಬಂದಿದೆ. ಆತ ಅವರ ಆರೋಗ್ಯವನ್ನು ವಿಚಾರಿಸುವುದಕ್ಕೆ ತೆರಳಲೇಬೇಕು. ಮುಂಜಾನೆ ಆರು ಗಂಟೆಗೆ ಅಮ್ಮನಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಕೂಡ ಆಸ್ಪತ್ರೆಗೆ ಸೇರಿಸಿದ್ದಾನೆ. ಮನೆಯಲ್ಲಿ ಹೆಂಡತಿ ಗರ್ಭಿಣಿ ಅವಳನ್ನು ನೋಡಿಕೊಳ್ಳಬೇಕಾಗಿದೆ, ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾಗಿದೆ, ತುರ್ತು ಚಿಕಿತ್ಸೆ ನೀಡಿ ಹಿರಿಯರ ಪ್ರಾಣ ಉಳಿಸಿ ನೆಮ್ಮದಿಯ ಉಸಿರು ಬಿಟ್ಟಾಗ ಅಮ್ಮನ ಪ್ರಾಣ ಹೋಗಿರುವ ಸುದ್ದಿ ತಲುಪಿತು. ಅಮ್ಮನ ಕಡೆಗೆ ಹೊರಡೋಣ ಅಂತ ಹೊರಟ್ರೆ ತಾನು ಅಪ್ಪ ಆಗುತ್ತಿದ್ದೇನೆ ಅನ್ನುವ ಸುದ್ದಿಯೂ ಸಿಕ್ಕಿತು. ಅಮ್ಮ ತನ್ನ ಮನೆಯಲ್ಲಿ ಮತ್ತೆ ಹುಟ್ಟಿದ್ರು ಅಂತ ಸಂಭ್ರಮ ಪಟ್ಟ. ನೇರವಾಗಿ ಹೋಗಿ ತನ್ನ ಪುಟ್ಟಮಗಳನ್ನ ಕಣ್ತುಂಬಿಸಿಕೊಂಡು ಅಮ್ಮನ ಕಾರ್ಯ ಮುಗಿಸಿ ಮತ್ತೆ ಆಸ್ಪತ್ರೆಗೆ ಆಗಮಿಸಿ ಕಾದು ಕುಳಿತವರಿಗೆ ಔಷದ ನೀಡಿ ಮನೆಗೆ ಕಳಿಸಿಕೊಟ್ಟು ತನ್ನ ಮಗುವಿನ ಕಡೆಗೂಡಿದ. ಆತನ ದಿನಚರಿಯೇ ಹೀಗಾಗಿ ಬಿಟ್ಟಿದೆ. ಆಸ್ಪತ್ರೆಯಲ್ಲಿ ಸಮಯ ಕೊಡದೇ ಇದ್ದರೆ ಊರಲ್ಲಿ ಒಂದಷ್ಟು ಜನರ ನೆಮ್ಮದಿ ಹಾಳಾಗುತ್ತೆ ಅದೇ ಸಮಯದಲ್ಲಿ ಮನೆಗೂ ಸಮಯ ಕೊಡದಿದ್ದರೆ ಮನೆಯವರ ನೆಮ್ಮದಿ ಹಾಳಾಗುತ್ತೆ. ಮನಸ್ಸಿದ್ದರೆ ಎಲ್ಲವೂ ಸಾಧ್ಯ ಆಗುತ್ತೆ. ಹಾಗಾಗಿ ಇವತ್ತು ಮತ್ತೆ ಮನೆಯಲ್ಲಿ ಮಗುವನ್ನು ಆಟ ಆಡಿಸ್ತಾ ತುರ್ತಾಗಿ ಬಂದ ಕರೆಯನ್ನು ಸ್ವೀಕರಿಸಿ ಗಾಡಿ ಸ್ಟಾರ್ಟ್ ಮಾಡಿದ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ