ಸ್ಟೇಟಸ್ ಕತೆಗಳು (ಭಾಗ ೧೦೧೭)- ಗಾಳ

ಸ್ಟೇಟಸ್ ಕತೆಗಳು (ಭಾಗ ೧೦೧೭)- ಗಾಳ

ಈಗ ಈಗ ಗಾಳ ಹಾಕುವವರು ಹೆಚ್ಚಾಗಿದ್ದಾರೆ. ನೀನು ನದಿ ಬದಿಗೆ ಕೆರೆಗೆ ಅಂದುಕೊಂಡೆಯಾ? ಅಲ್ಲಪ್ಪ ವಿದ್ಯಾರ್ಥಿಗಳನ್ನು ತಮಗೆ ಉಪಯೋಗ ಆಗುವವರನ್ನ ಗಾಳ ಹಾಕಿ ಹಿಡಿದುಕೊಳ್ಳುತ್ತಾರೆ, ಇಲ್ಲಿ ಗಾಳ ಹಾಕುವವರು ತಮ್ಮ ಗಾಳದ ತುದಿಗೆ ವಿವಿಧ ರೀತಿಯ ಅದ್ಭುತಗಳನ್ನ ಸಿಕ್ಕಿಸಿಕೊಂಡಿರುತ್ತಾರೆ. ಒಂದಷ್ಟು ಅಂಕಗಳನ್ನು ಜೋಡಿಸಿರುತ್ತಾರೆ. ಸಾಧಕರ ಪಟ್ಟಿಗಳನ್ನು ಇಟ್ಟುಬಿಡುತ್ತಾರೆ. ಇದಕ್ಕಿಂತ ಅದ್ಭುತವಾದದ್ದು ಬೇರೇನಿಲ್ಲ ಅನ್ನೋದನ್ನ ತಿಳಿಸುತ್ತಾರೆ. ನಿಮ್ಮ ಜೀವನ ಬದಲಾಗಿ ಬಿಡುತ್ತೆ ಅನ್ನೋದನ್ನ ನಿಮಗೆ ಮನವರಿಕೆ ಮಾಡುತ್ತಾರೆ. ಎಲ್ಲ ವಿಚಾರಗಳನ್ನು ಇಟ್ಟುಕೊಂಡು ನಿಮ್ಮನ್ನ ಗಾಳಕ್ಕೆ ಸಿಕ್ಕಿಸಿಕೊಳ್ಳುತ್ತಾರೆ. ಈ ಗಾಳಕ್ಕೆ ಬಿದ್ದವರು ಹಲವರಲ್ಲಿ ಕೆಲವರು ಮಾತ್ರ ತಮ್ಮ ಕನಸು ನನಸು ಮಾಡಿಕೊಳ್ಳುತ್ತಾರೆ ಉಳಿದವರೆಲ್ಲ ಆ ಗಾಳಕ್ಕೆ ಸಿಲುಕಿ ನರಳಿ ನರಳಿ ಜೀವನದಲ್ಲಿ ಕನಸುಗಳೇ ಇಲ್ಲವೇನೋ ಅನ್ನೋ ರೀತಿ ವರ್ತಿಸುತ್ತಿದ್ದಾರೆ. ನಿನ್ನ ಜೀವನವೇ ಪರಿವರ್ತನೆ ಆಗುತ್ತೆ ಅನ್ನೋ ತರ ಬಿಂಬಿಸಿ ಅವರ ಕನಸುಗಳನ್ನು ಸಾಧಿಸುವುದಕ್ಕೆ ನಿನ್ನನ್ನು ಬಳಸಿಕೊಳ್ಳುತ್ತಾರೆ. ಹಾಗಾಗಿ ಎಚ್ಚರವಿರಬೇಕು ನೀನು ನಿನ್ನ ಕನಸಿನ ದಾರಿಯಲ್ಲಿ ಸಾಗ್ತಾ ಇದೆಯೋ ಅಥವಾ ಅವರ ದುಡ್ಡು ಮಾಡುವ ಜೀವನದ ಕನಸಿಗೆ ನೆರವಾಗುತ್ತಿದ್ದೀಯೋ ಅಂತ. ಈ ಮಾತನ್ನ ನಮ್ಮ ಶಿಕ್ಷಕರು ತುಂಬಾ ಗಟ್ಟಿ ಮಾತಿನಲ್ಲಿ ಹೇಳುತ್ತಿದ್ದರು. ಕಾರಣ ಇಷ್ಟೇ ಮೊನ್ನೆ ನಡೆದ ಪರೀಕ್ಷೆಯಲ್ಲಿ ಉತ್ತಮ ಅಂಕ ಬರಲಿಲ್ಲ, ಅಪ್ಪ ಅಮ್ಮನ ಕನಸನ್ನ ನನಸು ಮಾಡುವುದಕ್ಕಾಗಿಲ್ಲ, ಇವರ ಒತ್ತಡಗಳ ನಡುವೆ ಬದುಕೋಕಾಗ್ತಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡ ಹುಡುಗನ ವರದಿಯನ್ನ ಓದಿ ತರಗತಿಯಲ್ಲಿ ಹೇಳ್ತಾ ಇದ್ರು... ಆಗ ಬಂದ ಮಾತು ಮತ್ತೆ ಮತ್ತೆ ನನ್ನನ್ನ ಎಚ್ಚರಿಸುತ್ತಿತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ