ಸ್ಟೇಟಸ್ ಕತೆಗಳು (ಭಾಗ ೧೦೧) - ಬದುಕು ಜಟಕಾ ಬಂಡಿ

ಸ್ಟೇಟಸ್ ಕತೆಗಳು (ಭಾಗ ೧೦೧) - ಬದುಕು ಜಟಕಾ ಬಂಡಿ

ರೈಲು ನಿಧಾನವಾಗಿ ಚಲಿಸಲು ಆರಂಭಿಸಿದೆ. ಇಲ್ಲಿಂದ ಹೊರಡುವಾಗ ಗಮ್ಯದ ಆಲೋಚನೆ ಇಲ್ಲ. ಆದರೆ ಸಾಗುತ್ತಾ ಸಾಗುತ್ತಾ ಹೋದ ಹಾಗೆ ಗುರಿಯ ಕಡೆಗೆ ಬೆಳಕು ಮಿನುಗುತ್ತದೆ. ರೈಲು ತುಂಬಾ ಶ್ರಮಪಟ್ಟು ತನ್ನ ಆರಂಭವನ್ನು ಕಂಡಿದೆ. ಒಂದಷ್ಟು ಸಮಯ ನುರಿತ ಚಾಲಕ ಬೆಳವಣಿಗೆಗೆ ಸಹಾಯಕರು ಬೇಕಾಗುತ್ತಾರೆ. ವೇಗ ಪಡೆದುಕೊಂಡ ಹಾಗೆ ಸ್ವಂತವಾಗಿ ಸಾಗುವ ಸಾಮರ್ಥ್ಯವಿದ್ದರೂ ಮಾರ್ಗದರ್ಶನ ನೀಡುವವರು ಖಂಡಿತವಾಗಿ ಬೇಕೇಬೇಕು. ಊರಿನಿಂದ ಹೊರಡುವ ರೈಲಿನಲ್ಲಿ ಹತ್ತೂರು ಇಳಿಯೋರು ಸಾವಿರಾರು, ಆದರೆ ಕೊನೆಯವರೆಗೂ ಉಳಿದು ಅಲ್ಲಿಗೆ ತಲುಪುವುದು ರೈಲು ಮಾತ್ರ .

ರೈಲಿಗೂ ನಾನು ಯಾರ ಹಂಗಿನಲ್ಲಿ ಇಲ್ಲ, ನನ್ನ ಗುರಿ ನಾ ಸಾಗಬೇಕೆಂಬ ಅರಿವಿದೆ. ರೈಲಿನೊಳಗೆ ಒಂದಷ್ಟು ಗದ್ದಲ, ಜಗಳ, ಸಿಟ್ಟುಗಳ ಜೊತೆ ಪ್ರೀತಿ-ಪ್ರೇಮ ಮೌಲ್ಯಗಳು ತುಂಬಿರುತ್ತವೆ. ಆರಿಸುವುದು ಪಯಣಿಗನಿಗೆ ಬಿಟ್ಟಿರುವುದು. ಮುಗ್ಧತನದಿಂದ ಆರಂಭವಾಗಿ ರೈಲಿನ ಪಯಣ ಕಾಲಗಳು ಉರುಳಿದ ಹಾಗೆ ದ್ವೇಷ-ಅಸೂಯೆ ಮತ್ಸರಗಳ ಹೊತ್ತು ಸಾಗಬೇಕಾಗುತ್ತದೆ. ಈ ರೈಲಿನಲ್ಲಿ ನೀವು ಟಿಕೆಟ್ ಖರೀದಿಸಿದ ಮೇಲೆ ಪಯಣ ಸಾಕೆಂದು ಅರ್ಧದಾರಿಯಲ್ಲಿ ಇಳಿಯುವ ಹಾಗಿಲ್ಲ. ರೈಲು ಕೆಲವೊಮ್ಮೆ ನಿಧಾನವಾಗುತ್ತದೆ, ನಿಂತುಬಿಡುತ್ತದೆ, ಒಂದಷ್ಟು ಸಮಸ್ಯೆಗಳು ಕೂಡ ಎದುರಾಗುತ್ತೆ, ಮತ್ತೆ ವೇಗ ಪಡೆದುಕೊಂಡು ಸಾಗುತ್ತದೆ. ಪಯಣಿಕರು ಇಳಿದು ಹೊರಟಾಗ ಒಂದು ಕ್ಷಣ ರೈಲಿಗೆ ನೋವಾದರೂ

ಹೊಸತನದ ಪ್ರಯಾಣಿಕರ ಆಗಮನಕ್ಕೆ ಎದುರು ನೋಡುತ್ತದೆ. ಈ ರೈಲಿನ ಒಳಗಡೆ ಎಲ್ಲವೂ ಇದೆ ಹುಡುಕಿ ಪಡೆದುಕೊಳ್ಳಬೇಕಾಗಿರೋದು ಪಯಣಿಗರ ಜವಾಬ್ದಾರಿ. ಸಣ್ಣಪುಟ್ಟ ಸಮಸ್ಯೆಗಳನ್ನು ದೂರಿ ಪ್ರಯೋಜನವಿಲ್ಲ, ಪರಿಹಾರ ಕಂಡುಕೊಳ್ಳಬೇಕು ಅಷ್ಟೇ. ನನ್ನ ರೈಲಿನ ಪಯಣ ಇನ್ನೂ ಮುಂದುವರೆದಿದೆ. ನಿಮ್ಮ ಪಯಣವು ಕೂಡ. ಸಿಕ್ಕವರನ್ನು ಸ್ವಾಗತಿಸಿ ಬಿಟ್ಟವರನ್ನ ನೆನೆಸಿ ಮುಂದೆ ಸಾಗೋಣ. ಸಾಗುವ ದಾರಿ ದೂರ ಇದೆ, ಇಲ್ಲಿ ಹೋಗುತ್ತಿರುವ ರೈಲಿನ ಅರಿವು ಹೊರಜಗತ್ತಿಗೂ ಅರಿವಾಗಲಿ.

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ