ಸ್ಟೇಟಸ್ ಕತೆಗಳು (ಭಾಗ ೧೦೨೨)- ಮಳೆರಾಯ

ಸ್ಟೇಟಸ್ ಕತೆಗಳು (ಭಾಗ ೧೦೨೨)- ಮಳೆರಾಯ

ಸ್ವಲ್ಪವಾದರೂ ವಿಶ್ರಾಂತಿ ನೀಡೋ ಮಾರಾಯ? ಅದೆಷ್ಟು ಅಂತ ಸತತವಾಗಿ ಸುರೀತಿಯಾ? ನಿನಗೂ ಒಂದಿಷ್ಟು ವಿರಾಮ ಬೇಡ್ವೇನೋ? ನಿನ್ನೆ ರಾತ್ರಿಯಿಂದ ಶುರುವಾದದ್ದು ಇಂದು ಸಂಜೆಯಾದರೂ ನಿಲ್ಲುವ ಯಾವ ಲಕ್ಷಣವೂ ಕಾಣ್ತಾ ಇಲ್ಲ. ಹೀಗೆ ಮಳೆ ಸುರಿತಾ ಹೋದ್ರೆ  ನೀನು ತುಂಬಿಸಿಟ್ಟುಕೊಂಡಿರುವ ನಿನ್ನ ಭಂಡಾರ ಖಾಲಿಯಾಗುವುದಿಲ್ಲವೇನೋ? ಇನ್ನೆಷ್ಟು ಸಮಯದವರೆಗೆ ಹೀಗೆ ಸುರಿಯುತ್ತಾನೆ ಇರುತ್ತೀಯೋ? ನಿನಗೆ ಅರ್ಥವಾಗ್ತಾ ಇಲ್ವಾ? ಈ ಬದುಕ್ತಾ ಇರುವ ನಮಗೆ ಒಂದು ಕ್ಷಣವಾದರೂ ಹೊರಗಡೆ ಓಡಾಡುವುದಕ್ಕಾದರೂ ಅವಕಾಶ ನೀಡು.. ಒಂದಷ್ಟು ಬಿಸಿಲನ್ನ ನೋಡುವ ವ್ಯವಸ್ಥೆ ಮಾಡು. ಅದಲ್ಲದೆ ಕ್ಷಣವೂ  ಎಡೆಬಿಡದೆ ಹೀಗೆ ಸುರಿಯುತ್ತಾ ಹೋದರೆ ಈ ಭೂಮಿ ಅದನ್ನ ಹೀರಿಕೊಳ್ಳುವುದಾದರೂ ಹೇಗೆ ? ನದಿ ಕೆರೆಗಳು ತುಂಬಿ ಕೊಂಡರೆ ಪರಿಸ್ಥಿತಿ ಏನು?

"ನೋಡು ಮಾರಾಯ, ನೀನು ಏನು ಬೇಕಾದರೂ ಅಂದುಕೋ. ನೀನು ಅಂದು ನಾನೊಮ್ಮೆ ಮಳೆ ಸುರಿಬೇಕು ಅಂತ ಅಂದಾಗ ಈ ಭೂಮಿಗೆ ಬೇಕಾಗಿರುವ ಮರ ಬೆಳೆಸಲಿಲ್ಲ? ನೀರಿಂಗುವುದಕ್ಕೆ ವ್ಯವಸ್ಥೆ ಮಾಡ್ಲಿಲ್ಲ, ಬಿಸಿಲು ಹೆಚ್ಚಾಗುತ್ತಾ ಇದೆ ಇದಕ್ಕೊಂದು ಪರಿಹಾರ ಕೊಡುವಂತೆ ಕೇಳಿದರು ನೀನು ಅದನ್ನು ಮಾಡುವುದಕ್ಕೂ ತಯಾರಿಲ್ಲ. ಪರಿಸರ ಕೇಳಿದಾಗ ಯಾವುದನ್ನು ಮಾಡದ ನೀನು ಈಗ ನನಗೆ ಹೀಗಾಗಬೇಕು ಹಾಗಾಗಬೇಕು ಅಂತ ಬೇಡಿಕೊಳ್ಳುತ್ತಾ ಇದ್ದೀಯಾ? ಈ ನೆಲಕ್ಕೆ ಏನು ಬೇಕು ಅಂತ ನನಗೆ ಗೊತ್ತಿದೆ. ನಾನದನ್ನ ಕೊಡ್ತಾ ಇದ್ದೇನೆ. ನಿನಗೇನು ಬೇಕೋ ಅದನ್ನ ಕೊಡೋದಕ್ಕೆ ನಾನಿರೋದಲ್ಲ. ನೀನು ಈ ಪರಿಸರದ ಮಾತನ್ನು ಕೇಳಿದರೆ ನಾನು ನಿನ್ನ ಮಾತನ್ನು ಕೇಳುತ್ತೇನೆ. ಹಾಗಾಗಿ ನಾನು ಸುರೀತೇನೆ. ಅನುಭವಿಸ್ತೀಯಾ. ಅನುಭವಿಸು, ನೀನು ಬದಲಾದರೆ ನಾನು ಬದಲಾಗ್ತೇನೆ ಇಲ್ಲದಿದ್ದರೆ ನನ್ನ ಇನ್ನೊಂದು ರೂಪವನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತೇನೆ. ಅವಕಾಶ ನಿನ್ನದು ಹೇಗೆ ಬೇಕಾದರೂ ಬಳಸಿಕೋ. ಮಳೆರಾಯನೊಂದಿಗೆ ಮಾತುಕತೆ ಮುಂದುವರೆದಿತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ