ಸ್ಟೇಟಸ್ ಕತೆಗಳು (ಭಾಗ ೧೦೨೪)- ಕಾಡಿತು
ಅವನು ಒಬ್ಬ ದಾರಿಯಲ್ಲಿ ಸಿಕ್ತಾನೆ, ಅವನಿಗೆ ಅನ್ನಿಸಿದನ್ನು ಮಾತನಾಡುತ್ತಾನೆ. ಎಲ್ಲದಕ್ಕೂ ಅರ್ಥಗಳನ್ನು ಹುಡುಕೋಕೆ ಆಗೋದಿಲ್ಲ. ಕೆಲವೊಂದು ಅರ್ಥಗಳನ್ನು ಹುಡುಕಿದರೆ ಬದುಕು ಅದ್ಭುತವಾಗಿರುತ್ತೆ. ಹಾಗೆ ಅವನನ್ನ ಕಾಡಿಸಬೇಕು ಅಂತ ಅನ್ನಿಸ್ತು. ಆ ಮತ್ತೆ ಈಗ ಹೇಗಿದ್ದೀರಿ? ಅಂತ ಕೇಳಿದೆ. ನಾನು ಚೆನ್ನಾಗಿದ್ದೇನೆ, ಅದ್ಭುತವಾಗಿದ್ದೇನೆ, ಬದುಕಿದ್ದೇನೆ ಆದರೆ ನೀನು ಸರಿಯಾಗಿಲ್ಲ ಅಂತ ಅಂದುಕೊಂಡಿದ್ದೇನೆ. ಬರೀ ಕಿಟಕಿ ಆಗಿದ್ದರೆ ಸಾಲದು, ಗೋಡೆಯಾಗಬೇಕು, ಬಾಗಿಲು ಆಗಬೇಕು, ಹಂಚಾಗಬೇಕು. ನೀನು ಯಾವುದೋ ಒಂದಾಗ್ಲಿಕೆ ಪ್ರಯತ್ನಿಸುತ್ತಿದ್ದೀಯಾ? ಹೀಗಾದರೆ ಬದುಕು ಚೆನ್ನಾಗಿರುವುದಿಲ್ಲ. ಕೆಲವೊಂದು ವಿಷಯಗಳಿಗೆ ನೀನು ನೇರವಾಗಿ ಪ್ರವೇಶಿಸುವುದಕ್ಕೆ ಬಾಗಿಲಾಗಬೇಕು. ಕೆಲವೊಂದು ಸಲ ಗೋಡೆಯಾಗಿ ಅಡ್ಡಲಾಗಿ ಒಳಗಿನವರಿಗೆ ರಕ್ಷಣೆಯಾಗಬೇಕು. ನೇರ ಪ್ರವೇಶ ಇಲ್ಲವಾದಾಗ ಕಿಟಕಿಯಾಗಿ ಗಮನಿಸುವುದಷ್ಟೇ ನಿನಗೆ ಕೆಲಸ. ಆಗ ಕಣ್ಣು ಸತ್ಯವನ್ನ ಕೇಳುತ್ತೆ. ಇದೆಲ್ಲವನ್ನ ಮಾಡ್ತಾ ಹೋದ್ರೆ ಮಾತ್ರ ನೀನು ಮನವೆಂಬ ಮನೆಯನ್ನು ಗಟ್ಟಿಯಾಗಿ ಕಟ್ಟಬಹುದು. ಹಾಗಾಗಿ ಯಾವುದೋ ಒಂದಾಗಬೇಡ. ಗೋಡೆ ಕಿಟಕಿ ಬಾಗಿಲು ಎಲ್ಲಾನು ಆಗಬಿಡು. ಅವನನ್ನ ಕಾಡಿಸುವುದಕ್ಕೆ ಮಾತನಾಡಿದವ ಅವನ ಮಾತು ನನ್ನನ್ನೇ ಕಾಡುವುದ್ದಕ್ಕೆ ಪ್ರಾರಂಭವಾಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ