ಸ್ಟೇಟಸ್ ಕತೆಗಳು (ಭಾಗ ೧೦೨೬)- ಮನಸ್ಸು

ಸ್ಟೇಟಸ್ ಕತೆಗಳು (ಭಾಗ ೧೦೨೬)- ಮನಸ್ಸು

ರಸ್ತೆ ಬದಿಯ ಸಣ್ಣ ಅಂಗಡಿಯ ಮುಂದಿನ ಮರದ ಬೆಂಚಿನ ಮೇಲೆ ಕುಳಿತು ತನ್ನ ಮಗನಿಗೆ ತಿಂಡಿ ತಿನ್ನಿಸುತ್ತಿದ್ದ ಆತ ಆದರೆ ತಿನ್ನಿಸುವ ಕ್ಷಣದಲ್ಲಿ ಸಂಭ್ರಮವಿಲ್ಲ, ಒಂದಷ್ಟು ನೋವು ತುಂಬಿದೆ. ಕಣ್ಣೀರು ಹೊರಗೆ ಬರುವುದಕ್ಕೆ ಕಾಯ್ತಾ ಇದೆ. ಮಗುವಿಗೆ ಹೊಟ್ಟೆ ತುಂಬುತ್ತಿದ್ದರೂ ಸುತ್ತಮುತ್ತ ಕಾಣುತ್ತಾ ಇರುವ ಕೆಲವು ವಿಚಾರಗಳು ಮನಸ್ಸನ್ನು ಆಕರ್ಷಿಸುತ್ತಿದೆ. ತಂದೆಯ ಕಣ್ಣೀರಿಗೆ ಕಾರಣವೇನೆಂದರೆ ನಾನು ಓದಿನ ಸಮಯದಲ್ಲಿ ಅವಕಾಶವಿದ್ದರೂ ಒಂದಷ್ಟು ಸಮಯವನ್ನು ವ್ಯರ್ಥ ಮಾಡಿದ್ದೇನೆ, ನನ್ನ ಪ್ರತಿಭೆಗೆ ತಕ್ಕ ಅವಕಾಶಗಳನ್ನು ಬಳಸಿಕೊಳ್ಳುವುದರಲ್ಲಿ ಸೋತಿದ್ದೇನೆ. ಒಂದಷ್ಟು ಕಡೆ ಹೊಸತನ್ನ ಸಾಧಿಸುವುದಕ್ಕೆ ಹಿಂಜರಿದಿದ್ದೇನೆ. ಕೆಲವೊಂದು ಕಡೆ ಜೀವನದ  ಧೈರ್ಯ ಕಳೆದುಕೊಂಡಿದ್ದೇನೆ, ಸೋತಾಗ ಅಲ್ಲಿ ನಿಂತುಬಿಟ್ಟಿದ್ದೇನೆ, ಧೈರ್ಯದಿಂದ ಮುನ್ನುಗ್ಗದೆ ಬಂದದ್ದನ್ನೇ ಅನುಭವಿಸುತ್ತಾ ಪ್ರಸ್ತುತದ ಸ್ಥಿತಿಗೆ ಬಂದು ತಲುಪಿಬಿಟ್ಟಿದ್ದೇನೆ.  ನಾನಂದು ಎಲ್ಲವನ್ನ ಎದುರಿಸಿ ಇನ್ನೊಂದಷ್ಟು ಹೆಜ್ಜೆಗಳನ್ನ ಗಟ್ಟಿಯಾಗಿ ಮುಂದೆ ಇಟ್ಟಿದ್ದರೆ ನನ್ನ ಮಗುವಿನ ಕಣ್ಣಿನಲ್ಲಿ ಕಾಣುವ ಆಸೆಗಳನ್ನು ಪೂರೈಸುತ್ತಿದ್ದೆನೋ ಏನೋ ಅನ್ನುವ ಯೋಚನೆ ಅವನ ಮನಸ್ಸಿನೊಳಗೆ ಹಾದು ಹೋಗಿ ಹಾಗೆ ಸ್ಥಿರವಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ