ಸ್ಟೇಟಸ್ ಕತೆಗಳು (ಭಾಗ ೧೦೨೭)- ಕಾಳಜಿ

ಸ್ಟೇಟಸ್ ಕತೆಗಳು (ಭಾಗ ೧೦೨೭)- ಕಾಳಜಿ

ನಮ್ಮ ಮನೆ ಹಿಂದುಗಡೆ ಸಣ್ಣದೊಂದು ಮರ ಇದೆ, ಅದರಲ್ಲಿ ಹೂವು ಹಣ್ಣು ಆಗೋದನ್ನು ನಾನು ಈವರೆಗೂ ಕಂಡವನಲ್ಲ. ಅಲ್ಲಿ ಅಳಿಲುಗಳ ಓಡಾಟ ಹೆಚ್ಚಾಗಿದೆ. ಮೊನ್ನೆ ತಾನೆ ಆ ಮರದಲ್ಲಿ ಕುಳಿತ ದೊಡ್ಡ ಅಳಿಲೊಂದು ಸಣ್ಣ ಅಳಿಲಿಗೆ ಏನೋ ಪಾಠ ಮಾಡ್ತಾ ಇತ್ತು. ತರಗತಿಯಲ್ಲಿ ಹೋಗಿ ಪಾಠ ಮಾಡ್ತಾ ಇದ್ದ ನನಗೆ ಈ ಪಾಠವನ್ನು ಕೇಳಬೇಕು ಅಂತ ಅನಿಸಿ ಕದ್ದು ಕೇಳುವುದಕ್ಕೆ ಆರಂಭ ಮಾಡಿದೆ. "ನೋಡು ಮಗು ನೀನು ಎಲ್ಲೇ ಹೋಗಿದ್ರು,ಏನೇ ತಿಂದರೂ, ಅದರ ಬೀಜವನ್ನು ಎಲ್ಲೆಲ್ಲಿ ಬಿಸಾಡಿ ಬರಬೇಡ ಅದನ್ನ  ಯಾವುದಾದರೂ ಒಂದು ಸ್ಥಳದಲ್ಲಿ ಮಣ್ಣನ್ನ ಅಗೆದು ಅದರೊಳಗೆ ಬೀಜವನ್ನ ಹಾಕಿ ಮಣ್ಣನ್ನ ಮುಚ್ಚಿ ಬಾ. ಅಮ್ಮ ಹಣ್ಣನ್ನು ಏನೋ ತಿಂತೇವೆ ಅದನ್ನ ಮತ್ತೆ ನೆಲಕ್ಕೆ ಹಾಕಿ ಮುಚ್ಚುವುದೇನಕ್ಕೆ. ನೋಡು ಮಗಾ, ಹಣ್ಣು ನಮಗೆ ಹೇಗೆ ತಿನ್ನೋದಕ್ಕೆ ಸಿಕ್ಕಿದ್ಯೋ ಮುಂದೆ ಒಂದಷ್ಟು ಜನರಿಗೆ ಹಣ್ಣು ಸಿಗಬೇಕಾಗಿರೋದು ಅದನ್ನ ತಲುಪಿಸುವುದು ನಮ್ಮ ಜವಾಬ್ದಾರಿ. ತಿಂದು ಹೊರಟು ಹೋಗೋದಲ್ಲ. ನಮಗೂ ಒಂದಷ್ಟು ಜವಾಬ್ದಾರಿಗಳಿವೆ ಹಾಗಾಗಿ ಇದನ್ನ ನೆನಪಿಂದ ಮಾಡು. "ಸರಿಯಮ್ಮ ಹಾಗೆ ಮಾಡುತ್ತೇನೆ" ಅಳಿಲಿನ ತಾಯಿ ತನ್ನ ಮರಿಗೆ ಹೇಳಿದ ಪಾಠ, ನನಗೆ ನಾನು ಮಾಡಬೇಕಾದ ಅಗತ್ಯ ಕೆಲಸವನ್ನು ನೆನಪಿಸಿತು. ಪ್ರಾಣಿಗಳಿಗೆ ಪರಿಸರದ ಮೇಲೆ ಕಾಳಜಿ ಇರುವಾಗ ವಿವೇಚನೆ ಇರುವ ನಮಗೆ ಕಡಿಮೆ ಆಗ್ತಾ ಇದೆಯೋ ಏನೋ ಅಲ್ವಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ