ಸ್ಟೇಟಸ್ ಕತೆಗಳು (ಭಾಗ ೧೦೨೮)- ನಿಜನಾ?

ಸ್ಟೇಟಸ್ ಕತೆಗಳು (ಭಾಗ ೧೦೨೮)- ನಿಜನಾ?

ಅವನೊಬ್ಬ ಹುಚ್ಚ ದಾರಿಯಲ್ಲಿ ಏನೇನೋ ಮಾತನಾಡುತ್ತಿರುತ್ತಾನೆ, ಅದನ್ನೆಲ್ಲ ನೀನು ಕೇಳಿಸಿಕೊಳ್ಳೋದಕ್ಕೆ ಹೋಗಬೇಡ. ನಿನ್ನ ಕೆಲಸ ಏನಿದಿಯೋ ಅದನ್ನು ಮಾಡು. ಅಪ್ಪ ಪ್ರತಿದಿನವೂ ಹೇಳ್ತಾನೇ ಇದ್ದರೂ ನನಗೆ ಇಲ್ಲಿಯವರೆಗೂ ಹುಚ್ಚ ಎಲ್ಲಿಯೂ ಸಿಕ್ಕಿರಲಿಲ್ಲ. ಆದರೆ ಮೊನ್ನೆ ಶನಿವಾರ ಕೆಲಸ ಮುಗಿಸಿ ವಾಪಸು ಬರ್ತಾ ಇರಬೇಕಾದರೆ ಒಂದಷ್ಟು ಜನ ಯಾರೋ ಒಬ್ಬರನ್ನ ನೋಡ್ತಾ ಇದ್ರು. ನಾನು ಕುತೂಹಲಕ್ಕೆ ಏನು ಅಂತ ಹತ್ತಿರ ಹೋಗಿ ನೋಡಿದಾಗ ಒಬ್ಬ ಕೆಳಗೆ ಕುಳಿತು ಜೋರಾಗಿ ಮಾತಾಡ್ತಾ ಇದ್ದ. "ನೀನೀಗ ಬದುಕ್ತಾ ಇರೋ ಬದುಕಿದಿಯಲ್ಲ ಅದು ನಿಂದಲ್ಲ, ಯಾರೂ ನಿನ್ನನ್ನ ಹಾಗೆ ಬದುಕುವ ಹಾಗೆ ಮಾಡಿಬಿಟ್ಟಿದ್ದಾರೆ.ಅವರಿಗೆ ಬೇಕಾದ ಹಾಗೆ ನಿನ್ನ ಬದುಕನ್ನ ತಿರುಗಿಸುತ್ತಿದ್ದಾರೆ. ಅವರ ಇಷ್ಟಗಳನ್ನ ಮಾರಾಟ ಮಾಡುವುದಕ್ಕೆ ಅವರ ಜೀವನ ಚೆನ್ನಾಗಿರುವುದಕ್ಕೆ ನಿನ್ನ ಇಷ್ಟಗಳನ್ನ ಅವರ ಇಷ್ಟಗಳಿಗೆ ಒಪ್ಪಿಸಿಕೊಂಡಿದ್ದಾರೆ. ಅವರ ವಸ್ತುಗಳನ್ನ ಬಳಸಿದರೆ ಮಾತ್ರ ನಿನ್ನ ಬದುಕು ಅದ್ಭುತ ಅಂತ ಬಿಂಬಿಸಿದ್ದಾರೆ. ಅವರು ಹೇಳುವ ರೀತಿಯಲ್ಲಿ ಬದುಕಿದರೆ ನಿನ್ನ ಬದುಕು ಸಮಾಜದಲ್ಲಿ ಗೌರವಯುತವಾಗಿರುತ್ತದೆ ಅಂತ ತೋರಿಸಿದ್ದಾರೆ. ಹೀಗಿರಬೇಕು, ಹೀಗೆ ಮಾತನಾಡಬೇಕು, ಹೀಗೆ ಓಡಾಡಬೇಕು, ಹೀಗೆ ವರ್ತಿಸಬೇಕು, ಇದೆಲ್ಲವೂ ಕೂಡ ಅವರು ನಿರ್ಧರಿಸಿರುವುದು. ನೀನು ಅದನ್ನು ಬಳಸ್ತಾ ಇದ್ದೀಯ ಅಷ್ಟೇ. ನಿನ್ನ ಪ್ರತಿಯೊಂದು ಸಮಯವು ನೀನು ಕಳೆಯುತ್ತಿರುವ ಕ್ಷಣಗಳು ಎಲ್ಲವೂ ಕೂಡ ಅವರು ನಿರ್ಧರಿಸಿದ್ದು. ಇಲ್ಲಿ ಅವರು ಅನ್ನೋದು ಭಗವಂತ ಅಲ್ಲ ಒಂದಷ್ಟು ದುಡ್ಡಿದ್ದವರು, ಹೆಚ್ಚು ಬುದ್ಧಿವಂತಿಕೆ ಇದ್ದವರು, ಅವರ ಜೀವನ ಚೆನ್ನಾಗಿರೋದಕ್ಕೆ ನಿನ್ನನ್ನ ಆಟ ಆಡಿಸ್ತಾ ಇದ್ದಾರೆ. ಹಾಗಾಗಿ ಒಂದಷ್ಟು ಎಚ್ಚರ ವಿವೇಚನೆಯಿಂದ ಬದುಕುತ್ತಾ ಹೋದರೆ ನಿನ್ನ ಕೈಯಲ್ಲಿ ಉಳಿಯುವ ದುಡ್ಡು ಹೆಚ್ಚಾಗುತ್ತೆ, ನಿನ್ನ ಕನಸು ದೊಡ್ಡದಾಗುತ್ತೆ, ಸ್ವಲ್ಪ ಯೋಚನೆ ಮಾಡು. ನಿನ್ನ ಬದುಕು ಇನ್ಯಾರದೋ ಕೈಲಿದೆ ?"

ನಾನು ಮತ್ತೆ ಅಲ್ಲಿಂದ ಮುಂದುವರೆದೆ ...ಇವನು ಹುಚ್ಚ ಹೌದೋ ಅಲ್ವೋ ಅನ್ನೋದು ನನಗಿನ್ನು ನಿರ್ಧಾರ ಆಗಿರಲಿಲ್ಲ. ಅವನ ಮಾತು ಮನಸ್ಸಿನೊಳಗೆ ಹಾಗೆ ಓಡಾಡ್ತಾ ಇತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ