ಸ್ಟೇಟಸ್ ಕತೆಗಳು (ಭಾಗ ೧೦೨೯)- ನಿಲ್ದಾಣ
ಊರು ತಲುಪಬೇಕಾದ ಕೊನೆಯ ಬಸ್ಸು ಪುತ್ತೂರು ನಿಲ್ದಾಣದಿಂದ ಸಿಗದೇ ಇರುವ ಕಾರಣಕ್ಕೆ ಊರಿಗೆ ಹತ್ತಿರದಲ್ಲಿರುವ ಕಾಣಿಯೂರು ಬಸ್ಸನ್ನೇರಿದೆ. ನಿಂತಿಕಲ್ಲಿನಲ್ಲಿ ಇಳಿದು ಊರಿನ ಕಡೆ ಹೋಗುವುದಕ್ಕೆ ಯೋಚಿಸ್ತಾ ಇರುವಾಗ, ಆ ನಿಲ್ದಾಣ ಹಳೆಯ ನೆನಪುಗಳನ್ನ ಮತ್ತೊಮ್ಮೆ ಹುಟ್ಟು ಹಾಕಿತು. ಸುಮಾರು 20 ವರ್ಷಗಳ ಹಿಂದೆ ಅದೇ ನಿಲ್ದಾಣದಲ್ಲಿ ನಾನು ನನ್ನಮ್ಮ ನನ್ನ ತಂಗಿ ನಿಂತಿದ್ವಿ. ಕೈಯಲ್ಲಿ ಒಂದು ರೂಪಾಯಿ ಇರಲಿಲ್ಲ ಮನೆಗೆ ಹೋಗೋ ದಾರಿಗೊತ್ತಿತ್ತು, ಸಾಗಬೇಕಾದ ದಾರಿ ತುಂಬಾ ದೂರ ಇತ್ತು. ಇಡೀ ಮನೆಯನ್ನು ಮೂಟೆಗಳಲ್ಲಿ ತುಂಬಿಸಿ ಮನೆಯನ್ನು ತೊರೆದು ಹೊಸ ಮನೆಗಾಗಿ ಹೊರಟಿದ್ವಿ. ನಮ್ಮದು ಅನ್ನೋದು ಏನೂ ಇರಲಿಲ್ಲ ಸಂಬಂಧಗಳನ್ನು ಹೊರತುಪಡಿಸಿ ಎಲ್ಲವನ್ನು ಮತ್ತೆ ಕಟ್ಟಿಕೊಳ್ಳಬೇಕು. ಇವತ್ತು ಅದೇ ನಿಲ್ದಾಣದಲ್ಲಿ ನಿಂತಿದ್ದೇನೆ ಬದುಕು ಕಟ್ಟಿ ಕೊಂಡಿದ್ದೇನೆ, ಸಂಬಂಧಗಳನ್ನು ಕಟ್ಟಿಕೊಂಡಿದ್ದೇನೆ, ನಿಲ್ಲುವುದಕ್ಕೆ ಸೂರನ್ನು ನಿರ್ಮಿಸಿಕೊಂಡಿದ್ದೇನೆ, ಕೈಯಲ್ಲಿ ದುಡ್ಡಿದೆ, ನೆನಪುಗಳಿವೆ. ಗೌರವದಿಂದ ಬದುಕಬೇಕಾದ ಎಲ್ಲ ಅರ್ಹತೆಯು ನಮಗಿದೆ. ಅವತ್ತು ನೋವಿತ್ತು. ಇವತ್ತು ಸಂಭ್ರಮವಿದೆ. ಆ ನಿಲ್ದಾಣ ಕಾಲ ಬದಲಾಗುತ್ತೆ ಅನ್ನೋದನ್ನ ಮತ್ತೆ ನೆನಪಿಸಿತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ