ಸ್ಟೇಟಸ್ ಕತೆಗಳು (ಭಾಗ ೧೦೨) - ಮಳೆಗೆ ಕಾರಣ
ನಡು ಬೇಸಿಗೆಯ ಸುಡುವ ಕಾಲ. ಸೂರ್ಯನಿಗೇ ತನ್ನ ಏರುತ್ತಿರುವ ಬಿಸಿಯನ್ನು ನಿಯಂತ್ರಿಸಲಾಗುತ್ತಿಲ್ಲ. ಆಗಾಗ ಅಡ್ಡ ಬಂದು ಒಂದಷ್ಟು ಭೂಮಿಗೆ ನೆರಳು ನೀಡುತ್ತಿರುವ ಮೋಡ ದೂರದಲ್ಲೇ ಓಡಾಡುತ್ತಿದೆ. ಆ ಗುಡ್ಡದ ಮೇಲೆ ಗಟ್ಟಿ ಕಲ್ಲಿನ ತುದಿಯ ಸಣ್ಣ ಹೊಂಡದಲ್ಲಿ ಎಲ್ಲಿಂದಲೋ ಹಾರಿ ಬಂದ ಸಣ್ಣ ಬೀಜವೊಂದು ಅಲ್ಪ ಮಣ್ಣಿನ ಹುಡಿಯ ಮೇಲೆ ಬೇರೆನ್ನ ಪಸರಿಸಿ ಬದುಕಲಾರಂಭಿಸಿತು. ಕಾಲದ ವೈಪರೀತ್ಯವೋ ಏನೋ ಅದು ಚಿಗುರಿದ ಗಳಿಗೆಗೆ ಮಳೆ ಮನೆಯೊಳಗೆ ಸೇರಿಕೊಂಡಿತ್ತು. ಚಿಗುರಿನ ಬಾಯಾರಿಕೆಗೆ ತೊಟ್ಟು ನೀರು ಸಿಗುತ್ತಿಲ್ಲ. ಬೇರಿಳಿಸಿ ನೀರು ಪಡೆಯೋಣವೆಂದರೆ ಕೆಳಗಿರುವುದು ಬಂಡೆಕಲ್ಲು. ಮುಂಜಾನೆ ಒಂದು ಕ್ಷಣ ಕವಿಯೋ ಮಂಜು ಹನಿ ನೀರ ಚೆಲ್ಲಿ ಕರಗುತ್ತದೆ. ಅದರಲ್ಲಿ ಸಂಜೆಯವರೆಗೂ ಸಾಗಿಸುವುದು ಕಷ್ಟ. ನೋವಿನ ಕೂಗು ಅಲ್ಲೇ ಹಾದು ಹೋಗುವ ಗಾಳಿಗೆ ಕೇಳಿತು. ತಕ್ಷಣ ದೇವರಿಗೆ ಸುದ್ದಿ ಮುಟ್ಟಿಸಿತೋ ಏನೋ ಮಳೆರಾಯ ಬಾಗಿಲು ತೆರೆದು ಹೊರಬಂದ. ಅಕಾಲದಲ್ಲಿ ಎಚ್ಚರವಾದ ಕಾರಣ ಬೇಸರದಿ ಹೊರಬಂದರೂ ವಿಷಯ ತಿಳಿದು ಲಗುಬಗೆಯಿಂದ ಕಪ್ಪು ಮೋಡವನ್ನೆಲ್ಲಾ ಹೊತ್ತುತಂದು ಗುಡ್ಡದ ಮೇಲಿಂದ ನೀರು ಜಿನುಗಿಸಿದ. ಚಿಗುರು ಉಸಿರಾಡಿತು, ಹಸಿರು ಕುಣಿಯಿತು, ಕೆರೆ ತುಂಬಿತು, ಭೂಮಿ ತಂಪಾಯಿತು. ಇಳೆ ಹಸಿರು ಹೊದ್ದದ್ದನ್ನ ಕಂಡು ಮಳೆರಾಯ ಊರೂರು ಸುತ್ತಿದ. "ಕಪ್ಪು ಮೋಡ ಖಾಲಿಯಾದರೆ ಮತ್ತೆ ತುಂಬಿಸುವೆ ಇವರೊಳಗಿನ ಜೀವಚೈತನ್ಯವನ್ನು ತುಂಬಿಸಿದ ಹಾಗೆ" ಎನ್ನುತ್ತಾ ಗಾಳಿಯೊಡಗೂಡಿ ತೇಲುತ್ತಿದ್ದ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ