ಸ್ಟೇಟಸ್ ಕತೆಗಳು (ಭಾಗ ೧೦೩೦)- ಓಟ

ಅವಳು ಕುಳಿತಿದ್ದಾಳೆ. ಪಕ್ಕದಲ್ಲಿ ಒಂದು ದೊಡ್ಡ ಬ್ಯಾಗು, ಅದರೊಳಗಿರುವ ವಸ್ತುಗಳನ್ನ ಎಲ್ಲವನ್ನ ಮಾರಾಟ ಮಾಡಿ ಮತ್ತೆ ತನ್ನ ಉದ್ಯೋಗದ ಕಡೆಗೆ ಹೊರಡಬೇಕು. ಆಕೆಯ ಊರು ಅದಲ್ಲ. ತನ್ನ ಓದಿಗೆ ಸರಿಯಾದ ಕೆಲಸವನ್ನು ಹುಡುಕುವುದಕ್ಕೆ ಸಮಯವೂ ಇರಲಿಲ್ಲ. ಮನೆಗೆ ಹಣ ಸಂಪಾದನೆಯ ಅವಶ್ಯಕತೆ ತುಂಬಾ ಇತ್ತು. ಹಾಗಾಗಿ ಸಿಕ್ಕ ಕೆಲಸವನ್ನೇ ನಂಬಿಕೊಂಡು ಹೊರಟು ಬಂದವಳು. ಬೆಳಗಿನಿಂದ ಸಂಜೆಯವರೆಗೆ ಇಡೀ ಊರು ಸುತ್ತಾಡಿ ಹೆಗಲಲ್ಲಿ ತುಂಬಿರುವ ಪುಸ್ತಕಗಳನ್ನ ಮಾರಾಟ ಮಾಡಿದರೆ ಒಂದಷ್ಟು ಹಣ ಸಿಗುತ್ತದೆ. ಒಂದು ಕಡೆ ಕುಳಿತು ದುಡಿಯುವುಕ್ಕಿಂತ ಇದರಲ್ಲೊಂದಷ್ಟು ಹೆಚ್ಚು ಸಿಗುತ್ತದೆ ಎನ್ನುವ ಕಾರಣಕ್ಕೆ ಆಕೆ ದುಡಿಯುತ್ತಾನೆ ಇದ್ದಾಳೆ. ರಜೆ ಹಬ್ಬ ಎಲ್ಲವನ್ನ ಮರೆತು ಬರೆಯ ದುಡಿಮೆಯೊಂದೇ ಆಕೆಯ ಜೀವನವಾಗಿದೆ. ಮನೆಯ ಸಾಲ ಮುಗಿಯುವವರೆಗೂ ದುಡಿಯಬೇಕಾದ ಅನಿವಾರ್ಯತೆ. ಅಲ್ಲಿ ಬಸ್ ನಿಲ್ದಾಣದಲ್ಲಿ ಕುಳಿತ ಹಾಗೆ ಮೌನವಾಗಿದ್ದಾಳೆ. ತನ್ನ ಮೊಬೈಲ್ ನಲ್ಲಿ ತನ್ನ ಮನೆಯ ನೆನಪುಗಳ ಭಾವಚಿತ್ರಗಳನ್ನು ನೋಡ್ತಾ ಕಣ್ಣೀರು ಇಳಿಸ್ತಾ ಇದ್ದಾಳೆ. ಹಳೆಯ ನೆನಪುಗಳನ್ನು ನೋಡಿ ಮನಸ್ಸಿನಲ್ಲಿ ನಗು ತಂದುಕೊಂಡು ಕಣ್ಣೀರು ಒರೆಸ್ಕೊಂಡು ಮತ್ತೆ ಬ್ಯಾಗನ್ನೇರಿಸುತ್ತಾ ಮಳೆಯಲ್ಲಿ ಓಡ್ತಾ ಇನ್ನೊಂದು ಊರಿಗೆ ಹೋಗುವ ಬಸ್ಸನ್ನೇರಿದ್ದಾಳೆ. ಆಕೆಗೆ ತುಂಬ ನಂಬಿಕೆ ಇದೆ ಆದಷ್ಟು ಬೇಗ ಈ ಬದುಕು ಬದಲಾಗುತ್ತೆ. ಮನೆಯವರ ನೆಮ್ಮದಿಗೆ ತಾ ದುಡಿಯುವುದರಲ್ಲಿ ಯಾವುದೇ ತಪ್ಪಿಲ್ಲವೆಂದು ಮುಖದಲ್ಲಿ ನಗು ಹೊತ್ತುಕೊಂಡು ದುಡಿಮೆ ಆರಂಭಿಸಿದ್ದಾಳೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ