ಸ್ಟೇಟಸ್ ಕತೆಗಳು (ಭಾಗ ೧೦೩೧)- ಸಾರ್ಥಕ

ಸ್ಟೇಟಸ್ ಕತೆಗಳು (ಭಾಗ ೧೦೩೧)- ಸಾರ್ಥಕ

ವೇದಿಕೆಯ ಮೇಲೇರಿ ನಿಂತಾಗ ಒಂದು ಕ್ಷಣ ತಾನು ಇಷ್ಟರವರೆಗೆ ದಾಟಿ ಬಂದ ಎಲ್ಲ ಹೆಜ್ಜೆಗಳನ್ನ ಹಾಗೇ ನೆನಪಿಸಿಕೊಂಡ, ಏನೇನೋ ಮಾತನಾಡಬೇಕು ಅಂದುಕೊಂಡಿದ್ದ ಆದರೆ ವೇದಿಕೆಯ ಮೇಲೆ ತಾನು ಸಾಧಿಸಿದ ಸಾಧನೆಗಳ ಮುಂದೆ ಮಾತುಗಳು ಮೌನಕ್ಕೆ ಜಾರಿದ್ದವು. ಆ ಕ್ಷಣದಲ್ಲಿ ಮೈಯ್ಯಲ್ಲೊಂದು ಕಂಪನ, ಜೊತೆಗೆ ಕೈ ನಡುಗುತ್ತಿತ್ತು ಸ್ವರವು ಏರಿಳಿತವನ್ನು ಕಾಣುತ್ತಿತ್ತು. ಕಣ್ಣಲ್ಲಿ ಸಾಧಿಸಿದ ಸಂಭ್ರಮಕ್ಕೆ ಕಣ್ಣೀರು ಒಮ್ಮೆ ಮಿನುಗಿ ಮಾಯವಾಯಿತು. ಕೆಳಗೆ ಕುಳಿತ ಹೆತ್ತವರ ಮುಖದಲ್ಲಿ ಇಷ್ಟು ದಿನದ ಕಾಯುವಿಕೆಗೆ ಫಲ ಸಿಕ್ಕಿತು ಮಾತನಾಡುವ ಬಾಯಿಗಳಿಗೆ ಉತ್ತರ ಸಿಕ್ಕಿತು ಅನ್ನುವ ನೆಮ್ಮದಿ. ಅಂತಹ ಸಾಧಿಸಿದ ನೆಮ್ಮದಿ ಮತ್ತು ಕನಸಿನ ಘಳಿಗೆ ಕಣ್ಮುಂದೆ ನಿಂತ ಕ್ಷಣದಲ್ಲಿ ಮಾತುಗಳು ಹೊರಡುವುದಿಲ್ಲ. ಭಾವನೆಗಳು ಕಣ್ಣ ಮೂಲಕ ಎದುರಿನವರಿಗೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಇದು ಇಂದು ಅವನ ಮುಖದಲ್ಲಿ ಕಂಡು ನನಗರ್ಥವಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ