ಸ್ಟೇಟಸ್ ಕತೆಗಳು (ಭಾಗ ೧೦೩೨)- ಕಿಟಕಿ

ಸ್ಟೇಟಸ್ ಕತೆಗಳು (ಭಾಗ ೧೦೩೨)- ಕಿಟಕಿ

ಮನೆ ಒಂದು. ಆ ಮನೆಗೆ ಹಲವು ಕಿಟಕಿಗಳನ್ನ ಬೇರೆ ಬೇರೆ ಅಂತರದಲ್ಲಿ ಜೋಡಿಸಿರುತ್ತಾರೆ. ಒಂದು ಮನೆಯೊಳಗಿಂದ ಆ ಕಿಟಕಿಯ ಹೊರಗೆ ಕಾಣುವ ದೃಶ್ಯಗಳು ಬೇರೆ ಬೇರೆಯೇ ಆಗಿರುತ್ತದೆ. ರಸ್ತೆ ಕಾಣಬಹುದು, ಪಕ್ಕದ ಮನೆ ಕಾಣಬಹುದು. ಒಳಿತೋ? ಕೆಡುಕೋ? ಬೇರೆ ಬೇರೆ ಕಿಟಕಿಗಳು ಬೇರೆ ಬೇರೆ ಸನ್ನಿವೇಶಗಳನ್ನೇ ಕಣ್ಣ ಮುಂದೆ ಸೃಷ್ಟಿಸುತ್ತವೆ. ಹಾಗಾಗಿ ನಿನ್ನ ಕಣ್ಣಿಗೆ ಕಾಣುತ್ತಿರುವುದೆಲ್ಲವೂ ಸತ್ಯವೇ. ಮನೆಗೆ ಒಂದು ಕಿಟಕಿ ಇದ್ದರೆ ಸಾಲೋದಿಲ್ಲ ಹಲವು ಕಿಟಕಿಗಳು ಹಲವು ಸತ್ಯಗಳನ್ನ ಹಲವು ಸಮಯದ ಬೆಳಕುಗಳನ್ನ ಆ ಮನೆಯೊಳಕ್ಕೆ ತಂದು ಮನೆಯನ್ನ ಇನ್ನೊಂದಷ್ಟು ಹೆಚ್ಚು ಕಾಲ ಸುಂದರಗೊಳಿಸುತ್ತದೆ. ನಿನ್ನ ಮನಸ್ಸಿಗೂ ಹಾಗೆ ಒಂದು ಕಿಟಕಿಯನ್ನು ತೆರೆದು ಏಕ ದಾರಿಯಲ್ಲಿ ಸಾಗುತ್ತಿರಬೇಡ. ಹೊರಗಿನ ಬೆಳಗು ನಿನ್ನೊಳಗಿನ ಬೆಳಕಿನ ಜೊತೆ ಸೇರಿ ಇನ್ನೊಂದಷ್ಟು ಹೆಚ್ಚು ಪ್ರಜ್ವಲನಾಗಬಹುದು ನೀನು, ಅವರ ಮಾತುಗಳಲ್ಲಿ ಯಾವುದೋ ಒಂದು ಸೂಕ್ಷ್ಮ ಸಂವೇದನಾಶೀಲ ಮಾತಿತ್ತು. ಅದನ್ನ ಅರ್ಥ ಮಾಡಿಕೊಳ್ಳುವುದಕ್ಕೆ ಕಣ್ಮುಚ್ಚಿ ಮೌನವಾಗಿ ಯೋಚಿಸು.

ಅವರು ಸರಿ ಇಲ್ಲ .ನನ್ನತ್ರ ತುಂಬಾ ಸಲ ಸುಳ್ಳು ಹೇಳಿದ್ದಾರೆ, ನನ್ನ ನಂಬಿಕೆಗೆ ಮೋಸ ಮಾಡಿದ್ದಾರೆ, ಹಾಗಾಗಿ ನಾನವರನ್ನು ಒಪ್ಪಿಕೊಳ್ಳುವುದಿಲ್ಲ. ಅದಲ್ಲದೆ ನನಗಾದ ಮೋಸವನ್ನು ಇನ್ನೊಂದಷ್ಟು ಜನರಿಗೆ ತಿಳಿಸುವ ಜವಾಬ್ದಾರಿ ನನ್ನದು. ಜೊತೆಗೆ ಅವರು ಕೂಡ ಎಷ್ಟೆಲ್ಲ ತೊಂದರೆ ಅನುಭವಿಸಿದ್ದಾರೆ ಅನ್ನೋದನ್ನ ಕೂಡ ನಾನು ತಿಳಿಸಬೇಕಲ್ವಾ? ಹಾಗಾಗಿ ಈ ನಂಬಿಕೆ ದ್ರೋಹ ಮಾಡ್ತಾರಲ್ಲ ಅವರನ್ನು ಯಾವತ್ತೂ ಕ್ಷಮಿಸಲೇಬಾರದು." "ಸರಿ ಮಗಾ, ಆದರೆ ನೀನು ಈ ಮಾತನ್ನ ಹೇಳಬೇಕಾದರೆ ನೀನು ಸರಿಯಾಗಿದ್ದೀಯಾ ಅಂತ ಯೋಚನೆ ಮಾಡು. ನೀನು ತಪ್ಪೇ ಮಾಡಿಲ್ವಾ? ನೀನು ನಂಬಿಕೆ ದ್ರೋಹಿಯಾಗ್ಲಿಲ್ವಾ? ನಿನ್ನಿಂದ ಯಾರಿಗೂ ತೊಂದರೆ ಆಗಲಿಲ್ವಾ? ಅಥವಾ ನಿನಗೆ ಯಾರಿಂದ ತೊಂದರೆ ಆಗ್ತಾ ಇದೆ ಅಂತ ಹೇಳ್ತಾ ಇದ್ದಿಯಲ್ಲ ಅವರಿಂದ ನಿನಗೆ ಏನು ಉಪಯೋಗ ಆಗಿಲ್ವಾ? ಇದೆಲ್ಲವೂ ಆಗಿರುವಾಗ ಅವರ ತೊಂದರೆಯನ್ನು ಗಟ್ಟಿಯಾಗಿಸಿಕೊಂಡಿದ್ದೀಯ ಯಾಕೆ? ನಿನಗೆ ಅರ್ಹತೆ ಇದ್ದರೂ ಆ ವಿಷಯವನ್ನು ಇನ್ನೊಂದಷ್ಟು ಜನರ ಮುಂದೆ ಹೇಳುವ ಅಗತ್ಯ ಏನಿದೆ? ನಿನಗೆ ಅರ್ಹತೆಯಿಲ್ಲವೋ ನೀನು ಮೌನವಾಗಿದ್ದು ಬಿಡು. ನೀನಿದ್ರಿಂದ ಕಳೆದುಕೊಳ್ಳುವುದಕ್ಕೆ ಏನಿಲ್ಲ.  ಅಪ್ಪನ ಮಾತು ಎಚ್ಚರಿಕೆಯ ಸಂದೇಶ ಸಾರ್ತಾ ಇತ್ತು. ಹಾಗಾಗಿ ಮುಂದೆ ಹೆಜ್ಜೆ ಇಡುವಾಗಲೂ ಒಂದು ಕ್ಷಣ ನಿಂತು ಯೋಚಿಸಿ ಮುಂದುವರೆದೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ