ಸ್ಟೇಟಸ್ ಕತೆಗಳು (ಭಾಗ ೧೦೩೪)- ಹೀಗೊಂದು ಊರು

ಈ ಕತೆ ನಮ್ಮೂರಿನದ್ದಲ್ಲ. ಯಾವುದೋ ಪರಿಚಯವಿಲ್ಲದ ದೂರದೂರಿನದ್ದಂತೆ ಹಾಗಾಗಿ ನಮ್ಮದು ಅಂತ ಅಂದುಕೊಳ್ಳಬೇಡಿ. ಮಳೆ ತುಂಬಾ ಜೋರಾಗಿತ್ತು. ನದಿ ತನ್ನ ದಾರಿ ಬಿಟ್ಟು ಅಕ್ಕಪಕ್ಕದ ಗದ್ದೆ ತೋಟಗಳನ್ನ ಹುಡುಕಿಕೊಂಡು ಹೊರಟಿತು. ಒಂದಿಷ್ಟು ಮನೆಗಳ ಬಳಿಗೂ ಹೋಗಿ ಮಾತನಾಡಿಸಿ ಮುಂದಿನ ಮನೆಯ ಕಡೆಗೆ ದಾಟುತ್ತಿತ್ತು. ಮನೆಯ ಒಳಗೆ ಬದುಕಿರುವವರಿಗೆ ದಿನದೊಡುವುದು ಕಷ್ಟ ಅಂತ ಗೊತ್ತಾಗಿ ಒಂದಷ್ಟು ಜನ ಸಹಾಯಕ್ಕಾಗಿ ಕೂಗ್ತಾಯಿದ್ರು ಅಗ್ನಿಶಾಮಕದ ಸಿಬ್ಬಂದಿಗಳು ಸಹಾಯಕ್ಕಾಗಿ ಓಡೋಡಿ ಬಂದರು. ಹಾಗೆ ಸಹಾಯವನ್ನ ಮಾಡ್ತಾ ಮಾಡ್ತಾ ಜನರನ್ನು ಸಂರಕ್ಷಿಸುತ್ತಾ ನೀರಿರುವ ಕಡೆಗಿಂತ ಎತ್ತರದ ಕಡೆಗೆ ಕೊಂಡುಯುತ್ತಿರುವಾಗ ,ಜನರನ್ನ ಕಾಯುವುದಕ್ಕೆ ಅಂತ ಇರುವ ಒಂದಷ್ಟು ಜನ ಅಧಿಕಾರಿಗಳು ಇನ್ನೊಂದು ದಡಕ್ಕೆ ಬಂದು ಕರೆದೊಯ್ಯುತ್ತಿರುವವರನ್ನು ನಿಲ್ಲಿಸಿ, ಅವರ ಜೊತೆಗೆ ಒಂದಿಷ್ಟು ಭಾವಚಿತ್ರಗಳನ್ನು ತೆಗೆದುಕೊಂಡು ಅಲ್ಲಿಂದ ಹೊರಟು ಹೋದರು. ಮರುದಿನದ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯೊಂದು ರಾರಾಜಿಸುತ್ತಿತ್ತು. ಈ ಅಧಿಕಾರಿಗಳ ಪರಿಶ್ರಮ ನಾಯಕತ್ವ ಮತ್ತು ಸೂಕ್ತ ಸಮಯದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಹಲವು ಜನರ ಪ್ರಾಣ ಉಳಿಯಿತು, ಅನ್ನೋದು ದೊಡ್ಡ ಅಕ್ಷರಗಳಲ್ಲಿ ಅಚ್ಚೊತ್ತಿಬಿಟ್ಟಿತ್ತು. ಕಷ್ಟದಲ್ಲಿರುವಾಗಲೂ ಅವರ ಮೊಬೈಲ್ ರಿಂಗಣಿಸಿರಲಿಲ್ಲ ನೋವಿನಲ್ಲಿರುವಾಗ ಹತ್ತಿರ ಕರೆದು ಸಾಂತ್ವನದ ಮಾತನಾಡಲಿಲ್ಲ, ಆದರೆ ಪತ್ರಿಕೆಗಳಲ್ಲಿ ಸುದ್ದಿ ಮಾತ್ರ ಆಗಿತ್ತು .ಅಧಿಕಾರಿಗಳು ಸುದ್ದಿಯೇ ಹಿಂದೆ ಓಡುತ್ತಿದ್ದರು. ನಿಜವಾದ ಸ್ವಯಂಸೇವಕರು ನೀರು ತುಂಬಿದ ಪ್ರದೇಶದಲ್ಲಿ ಜೀವ ರಕ್ಷಿಸುತ್ತಿದ್ದರು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ