ಸ್ಟೇಟಸ್ ಕತೆಗಳು (ಭಾಗ ೧೦೩೬)- ವರ್ತಮಾನ

ಓದಿನಿಂದಲೂ ಆತ ಎಲ್ಲದರಲ್ಲೂ ಮುಂದು, ಸಮಾಜಕ್ಕೆ ಏನಾದರೂ ನೀಡಬೇಕು ಅಂತ ತುಂಬಾ ತುಡಿತ ಇರುವಂತಹ ವ್ಯಕ್ತಿ. ಹಾಗೆ ಕಷ್ಟ ಪಟ್ಟು ಓದಿ ಮನೆಯನ್ನು ನಿಭಾಯಿಸ್ತಾ ಬ್ಯಾಂಕ್ ಒಂದರಲ್ಲಿ ಕೆಲಸವನ್ನು ಪಡೆದುಕೊಂಡ .ನಿಷ್ಠೆ ಪ್ರಾಮಾಣಿಕತೆಯಿಂದ ಹೆಸರುವಾಸಿಯಾದ, ಜನ ಅವನನ್ನ ಇಷ್ಟ ಪಡುವುದಕ್ಕೆ ಆರಂಭ ಮಾಡಿದರು. ಹೀಗೆ ದಿನಗಳು ಉರುಳುತ್ತಾ ಹೋಯಿತು ಆತನಿಗೆ ತನ್ನ ಬದುಕಲ್ಲಿ ಬದಲಾವಣೆಯೊಂದು ಘಟಿಸುತ್ತೆ ಅನ್ನೋದು ಯೋಚನೆ ಕೂಡ ಇರಲಿಲ್ಲ .ಸರಕಾರದ ಯಾವುದೋ ಒಂದು ಇಲಾಖೆಯ ಹಣವು ತನ್ನ ಬ್ಯಾಂಕಿನ ಮೂಲಕ ಹಾದು ಹೋಗಬೇಕಿತ್ತು. ಅದು ಸಣ್ಣ ಮೊತ್ತವೆನಲ್ಲ. ಅದಕ್ಕೆ ಜನರ ಬಳಿಗೆ ತಲುಪುವುದಕ್ಕೆ ಏನೆಲ್ಲ ಸಾಧ್ಯತೆಗಳನ್ನು ಸೃಷ್ಟಿಸಿಕೊಳ್ಳಬೇಕೋ ಆತ ಎಲ್ಲಾ ತಯಾರಿಗಳನ್ನು ಮಾಡಿಕೊಂಡ. ಆದರೆ ಕೆಲವೊಂದು ಸಲ ದೊಡ್ಡವರ ಮಾತನ್ನು ಕೇಳಬೇಕಾಗ್ತದೆ ಹಾಗಾಗಿ ತನ್ನ ಬ್ಯಾಂಕಿನಲ್ಲಿದ್ದ ಹಣ ಆತನಿಗರಿವಿಲ್ಲದೆ ಇನ್ಯಾವುದೋ ಕಡೆಗೆ ಸಾಗುವುದರ ಸುಳಿವು ಸಿಕ್ತು. ಇದನ್ನ ತಪ್ಪಿಸುವುದಕ್ಕೆ ಹಲವು ಬಾರಿ ಪ್ರಯತ್ನ ಪಟ್ಟ ಹಲವು ಜನರ ಬಳಿ ಕೇಳಿಕೊಂಡ ಆದರೆ ದೊಡ್ಡವರ ಮಾತಿನ ಮುಂದೆ ಈತನ ಮಾತಿಗೆ ಬೆಲೆ ಸಿಗಲಿಲ್ಲ. ಆದರೆ ಇದು ಸುದ್ದಿ ಆದ್ರೆ ಆತನದ್ದೇ ತಪ್ಪು ಎಂದಾಗುತ್ತದೆ, ಇಷ್ಟು ದಿನ ಸಂಪಾದಿಸಿದ ಮೌಲ್ಯಗಳೆಲ್ಲವೂ ಗಾಳಿಗೆ ತೂರಿ ಹೋಗುವುದ ಕಂಡು ಕೆಲವೇ ದಿನಗಳಲ್ಲಿ ತನ್ನ ಸುದ್ದಿಯು ಪತ್ರಿಕೆ ಟಿವಿ ಗಳಲ್ಲಿ ರಾರಾಜಿಸಿದರೆ ತನ್ನ ಕುಟುಂಬದವರ ಪಾಡೇನು ಅನ್ನೋದನ್ನ ಯೋಚಿಸಿ ಆತ್ಮಹತ್ಯೆಗೆ ಶರಣಾಗಿ ಬಿಟ್ಟ. ಯಾವುದು ದೊಡ್ಡವರ ಜೂಜಾಟದ ನಡುವೆ ಮೌಲ್ಯಗಳನ್ನ ತುಂಬಿಕೊಂಡ ವ್ಯಕ್ತಿ ಒಬ್ಬ ತನ್ನ ಪ್ರಾಣವನ್ನ ಕಳೆದುಕೊಂಡುಬಿಟ್ಟ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ