ಸ್ಟೇಟಸ್ ಕತೆಗಳು (ಭಾಗ ೧೦೩) - ಕತ್ತಲು

ಸ್ಟೇಟಸ್ ಕತೆಗಳು (ಭಾಗ ೧೦೩) - ಕತ್ತಲು

ಅವಳಿಗೋ ಅವನೇ ಆಸರೆ. ಹೆಜ್ಜೆ  ಇಡುವುದರಿಂದ ಹಿಡಿದು ಜಗತ್ತು ಕಾಣುವವರೆಗೆ. ದೃತರಾಷ್ಟ್ರನಿಗೆ ಸಂಜಯನಂತೆ. ಸೂರ್ಯ ಕಣ್ಣುಬಿಟ್ಟ ಗಳಿಗೆ ಜಗತ್ತೆಲ್ಲ ಬಣ್ಣಗಳ ಒಳಗೆ ಮಿಂದೆದ್ದರು ಅವಳಿಗೆ ಕಪ್ಪೊಂದೇ ಕಾಣುವ ಬೆಳಕು. ಒಂದಿನಿತೂ ಬೇಸರವಿಲ್ಲ. ನಿದ್ದೆಯಿಂದೆದ್ದ ಮನಸ್ಸಿನ ಬಾಗಿಲು ಬಡಿವಾ ಅವನ ಮೃದು ಸ್ಪರ್ಶವೇ ಶುಭೋದಯ. ಸ್ಪರ್ಶ ವಾಸನೆಗಳು ಮನಸ್ಸಲ್ಲಿ ತರಂಗ ಏರ್ಪಡಿಸಿದರೆ ಅದಕ್ಕೊಂದು ಅಂದದ ಚೌಕಟ್ಟು ಹಾಕಲು ಅವನು ಜೊತೆಯಾಗಿರುತ್ತಾನೆ. ಅವಳು ಸಂಭ್ರಮಿಸುತ್ತಾಳೆ, ಆಗಸದ ಮೋಡಗಳ ಚಿತ್ತಾರಕ್ಕೆ, ಹಕ್ಕಿಗಳ ಬಣ್ಣದ ರೆಕ್ಕೆಗಳ ವಿನ್ಯಾಸಕ್ಕೆ, ಕಾಮನಬಿಲ್ಲಿನ ರಂಗೋಲಿಗೆ, ಮೈದಾನದಲ್ಲಿರುವ ಮಕ್ಕಳ ಆಟಕ್ಕೆ, ಪ್ರಾಣಿಗಳ ಮುಗ್ಧತೆಗೆ, ಎಲ್ಲವಕ್ಕೂ ಅವನ ಮಾತುಗಳಿಂದಲೇ ಅವಳು ಸಂಭ್ರಮಿಸುತ್ತಾಳೆ. ಕಾಲ ಹೀಗೆ ಇರಲಿ ಎಂದು ಹಾರೈಸೋರು ಎಲ್ಲರೂ, ಆದರೂ ಈ ದಿನ ಗೋಡೆ ಮೇಲಿನ ಕ್ಯಾಲೆಂಡರ್ ಬದಲಾಗುತ್ತದೆ. ಮತ್ತದೇ ಸೂರ್ಯನ ಹೊಂಬಣ್ಣ. ವಿಧಿಯ ದೃಷ್ಟಿಗೆ ಅವನು ಬಿದ್ದರೆ ಅವಳ ಕಪ್ಪುಗಳಿಗೆ ಬಣ್ಣಗಳನ್ನು ಹುಡುಕಿ ತುಂಬಿಸುವುದು ಯಾರು?

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ