ಸ್ಟೇಟಸ್ ಕತೆಗಳು (ಭಾಗ ೧೦೪೨)- ದೌರ್ಜನ್ಯ

ಸ್ಟೇಟಸ್ ಕತೆಗಳು (ಭಾಗ ೧೦೪೨)- ದೌರ್ಜನ್ಯ

ವರದಿಯನ್ನ ಬರಿಬೇಕು ಅಂತ ಕೈಯಲ್ಲಿ ಪೆನ್ನು ಹಿಡಿದವನು ಮತ್ತೆ ಯೋಚಿಸ್ತಾ ಇದ್ದಾನೆ. ಆತನಿಗೆ ಸಂಪಾದಕರು ಸುದ್ದಿ ಒಂದನ್ನ ತಾ ಅಂತ ಹೇಳಿದರು. ಸಣ್ಣ ಮಕ್ಕಳ ಮೇಲೆ ಆಗ್ತಾ ಇರುವಂತಹ ದೌರ್ಜನ್ಯಗಳನ್ನ ಒಂದಷ್ಟು ವಿವರಣೆಗಳೊಂದಿಗೆ ಹುಡುಕಿ ಬಾ ಅಂತ ಹೇಳಿದ್ದಕ್ಕೆ ಆತ ಊರೂರು ಅಲೆಯುತ್ತಿದ್ದ. ಯಾವ ಊರಿನಲ್ಲಿ ಏನು ಸಮಸ್ಯೆ ಇದೆ, ಮಕ್ಕಳಿಗೆ ಯಾವ ರೀತಿ ತೊಂದರೆಗಳು ಆಗ್ತಾ ಇದಾವೆ ಅನ್ನೋದನ್ನ ಪಟ್ಟಿ ಮಾಡಿ ವರದಿ ತಯಾರಿಸುತ್ತಿದ್ದ. ಹಾಗೆ ಮನೆಯಲ್ಲಿ ಸುಮ್ಮನೆ ಕುಳಿತು ಟಿವಿಯೊಳಗೆ ಕಾಣುತ್ತಿರುವಂತಹ ಹಾಡು ನೃತ್ಯ ಅಭಿನಯ ಇವೆಲ್ಲದರಲ್ಲಿ ಮಕ್ಕಳನ್ನು ತೊಡಗಿಸಿಕೊಂಡಿರುವುದು ಅದು ದೌರ್ಜನ್ಯ ಅಲ್ವಾ ಅನ್ನುವ ಪ್ರಶ್ನೆ ಕಾಡುವುದಕ್ಕೆ ಆರಂಭವಾಯಿತು. ಏಕೆಂದರೆ ತಂದೆ ತಾಯಿಗಳಿಗೆ ತಾವು ಪ್ರಸಿದ್ಧಿ ಆಗಬೇಕು ಅನ್ನುವ ಕಾರಣಕ್ಕೆ ಮಕ್ಕಳನ್ನು ಅವರ ಆಸಕ್ತಿಗೂ ಮಿಗಿಲಾಗಿ ಹಾಡು ನೃತ್ಯ ಅಭಿನಯ ಅನ್ನೋದಕ್ಕೆ ಸೇರಿಸಿ ಅಲ್ಲಿ ಅವರ ವಯಸ್ಸಿಗೆ ಮೀರಿದ ವಿಚಾರಗಳನ್ನ ಅರ್ಥವೇ ಗೊತ್ತಿಲ್ಲದೆ ವೇದಿಕೆಯ ಮೇಲೆ ಅಭಿನಯಿಸ್ತಾ ಅವರ ಮನಸ್ಸಿನಲ್ಲಿ ಅವರೊಬ್ಬರು ಅದ್ಬುತ ಸಾಧಕರ ಅನ್ನುವ ವಿಚಾರಗಳನ್ನು ತುಂಬಿಸುತ್ತಾ ಆ ಮಕ್ಕಳ ಭವಿಷ್ಯವನ್ನು ಹಾಳು ಮಾಡ್ತಾ ಇರುವುದು ದೌರ್ಜನ್ಯ ಅಲ್ಲವೇ? 14 ವರ್ಷಕ್ಕಿಂತ ಸಣ್ಣ ಮಕ್ಕಳು ದುಡಿಯಬಾರದು ಅನ್ನುವ ಇವರೇ ಮಕ್ಕಳನ್ನು ಧಾರವಾಹಿ ಚಲನಚಿತ್ರಗಳಲ್ಲಿ ಹಗಲು ರಾತ್ರಿ ದುಡಿಸುತ್ತಿರುವುದೇನು? ಯಾವುದು ದೌರ್ಜನ್ಯ ಅನ್ನೋದರ ಬಗ್ಗೆ ಸರಿಯಾಗಿ ಅರಿವಿಲ್ಲದೆ ಸುಮ್ಮನೆ ಯೋಚಿಸ್ತಾ ಕುಳಿತಿದ್ದವನಿಗೆ ಉತ್ತರ ಸಿಗಲಿಲ್ಲ. ನೀವೇನಾದ್ರೂ ಅವನಿಗೆ ಸಹಾಯ ಮಾಡ್ತೀರಾ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ