ಸ್ಟೇಟಸ್ ಕತೆಗಳು (ಭಾಗ ೧೦೪೬)- ಕಾಯುವಿಕೆ

ಸ್ಟೇಟಸ್ ಕತೆಗಳು (ಭಾಗ ೧೦೪೬)- ಕಾಯುವಿಕೆ

ಅವನು ಕಾಯುತ್ತಿದ್ದ ತನ್ನವರಿಗಾಗಿ ಆತನಿಗೆ ತುಂಬ ನಂಬಿಕೆಯಿತ್ತು. ಖಂಡಿತವಾಗಿಯೂ ನನ್ನವರಿನ್ನೂ ಬದುಕಿದ್ದಾರೆ. ನನ್ನ ಹುಡುಕಿ ಬರುತ್ತಾರೆ. ಆತ ಅಲ್ಲೇ ಓಡಾಡ್ತಾ ಇದ್ದ. ಆ ಮಣ್ಣಿನ ರಾಶಿಯ ಕೆಳಗಡೆ ತನ್ನವರು ಅವಿತು ಕುಳಿತಿದ್ದಾರೋ? ತನ್ನೊಂದಿಗೆ ಆಗಾಗ ಮನೆಯಲ್ಲಾಡುತ್ತಿದ್ದ ಕಣ್ಣ ಮುಚ್ಚಾಲೆಯ ತರಹ ಆಡುತ್ತಿದ್ದಾರೋ ಅಥವಾ ಯಾರದೋ ನೆಂಟರ ಮನೆಗೆ ಹೋಗಿದ್ದಾರೋ? ಗೊತ್ತಿಲ್ಲ ನಾನು ಪುಟ್ಟ ಮರಿಯಾಗಿದ್ದಾಗ ಯಾರೋ ರಸ್ತೆಯಲ್ಲಿ ಬಿಟ್ಟು ಹೋಗಿದ್ದವನನ್ನು ಎತ್ತಿ ತಂದು ಆಡಿಸಿ ಮುದ್ದಿಸಿ ಪ್ರೀತಿಸಿದವರು ಆ ಮನೆಯವರು.ಒಂದಿನವೂ ನನಗೆ ನೋವಾಗುವಂತೆ ನಡೆದುಕೊಂಡವರಲ್ಲ ನಾನು ಅವರ ನಿಯತ್ತಿನ ಮಗನಾಗಿ ಆ ಮನೆಯನ್ನ ಕಾಯುತ್ತಿದ್ದೆ. ಜೋರು ಮಳೆ ಇದ್ದ ಕಾರಣ ಪೇಟೆಗೆ ಹೋಗಿದ್ದ ಮನೆ ಯಜಮಾನ  ಬರಲಿಲ್ಲ ಅನ್ನುವ ಕಾರಣಕ್ಕೆ ನಾನೇ ಅವನನ್ನ ಹುಡುಕಿ ಹೊರಟಿದ್ದೆ. ಅವನು ಸಿಗ್ಲಿಲ್ಲ ವಾಪಸು ಬಂದಾಗ ಇಡೀ ಊರೇ ಅಪರಿಚಿತವಾಗಿತ್ತು. ಮನೆಗಳಿಲ್ಲ ಗಿಡ ಮರಗಳಿಲ್ಲ ಏನೂ ಇಲ್ಲದ ಬರಿಯ ನೆಲವಾಗಿತ್ತು. ಅಲ್ಲಲ್ಲಿ ನನ್ನವರ ನೆನಪುಗಳಿಗಾಗಿ ಹುಡುಕಿದೆ ಎಷ್ಟು ಹುಡುಕಿದರೂ ಏನು ಸಿಗುತ್ತಿಲ್ಲ. ಆದರೂ ಕಾಯುತ್ತಿದ್ದೆ ನನ್ನ ಕೂಗು ದೇವರಿಗೂ ಕೇಳಿಸ್ತೋ ಏನೋ. ನನ್ನ ಇಡೀ ಮನೆಯವರಲ್ಲಿ ಒಂದಿಬ್ಬರು ಎಲ್ಲೋ ಪ್ರತ್ಯಕ್ಷ ಆಗಿಬಿಟ್ಟರು. ನನ್ನನ್ನ ಗುರುತಿಸಿದ್ರು ನನಗೆ ಜೀವ ಬಂದಂತಹ ಅನುಭವ. ಆದರೆ ಅವರ ಮುಖದಲ್ಲಿ ಕಳೆದುಕೊಂಡ ನೋವಿತ್ತು. ನಾಯಿಯೊಂದು ದೂರದಲ್ಲಿ ತನ್ನ ಯಜಮಾನ ಸಿಕ್ಕಿದ್ದಕ್ಕೆ ಸಂಭ್ರಮ ಪಡುತ್ತಾ ಹೇಳುವ ಹಾಗೆ ನನಗನ್ನಿಸ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ