ಸ್ಟೇಟಸ್ ಕತೆಗಳು (ಭಾಗ ೧೦೪೭)- ಡೋಲು
ಡೋಲಿನ ಶಬ್ದ ಹೆಚ್ಚಾಗ್ತಾ ಇದೆ. ಮೊನ್ನೆವರೆಗೂ ಮಾತಿನ ಶಬ್ದ ಆಗಾಗ ಕೇಳಿ ಬರ್ತಾ ಇತ್ತು. ಯಾವುದೋ ಕಾರ್ಯಕ್ರಮದಲ್ಲಿ ಆಚರಣೆಗಳಲ್ಲಿ ಕೇಳುತ್ತಿದ್ದದ್ದು ಇವತ್ತು ಗೇಟಿನ ಮುಂದಕ್ಕೆ ಬಂದಿದೆ. ಇಲ್ಲಿಗೆ ಬರುವುದಕ್ಕೂ ಒಳಗಿರುವವರು ಕಾರಣ. ಈ ಭೂಮಿಯಲ್ಲಿ ಮೊದಲು ಉತ್ತು ಬಿತ್ತಿ ಬೆಳೆದವರು ಇವರೇ ಎನ್ನುವ ನಂಬಿಕೆ .ಆದರೆ ಇಂದಿನವರೆಗೂ ಅವರಿಗೆ ಗಟ್ಟಿಯಾಗಿ ನಿಲ್ಲುವುದಕ್ಕೆ ಅಂತ ಯಾವುದೇ ಸ್ಥಳವನ್ನು ಯಾರು ಕೊಡಲೇ ಇಲ್ಲ. ಅದಕ್ಕಾಗಿ ಪ್ರತಿಭಟನೆ ಜೋರಾಗಿದೆ ಇವರ ಈ ಶಬ್ದ ಒಮ್ಮೆ ನಿಂತು ಹೋಗಲಿ ಅಂತ ಮತ್ತೆ ಮತ್ತೆ ಒಳಗಿನವರು ಕೇಳಿಕೊಳ್ಳುತ್ತಿದ್ದಾರೆ. ಅವರಿಗೆ ಒಂದು ದಿನದ ಕಿರಿಕಿರಿ ಆದರೆ ಹೊರಗೆ ಡೋಲು ಬಡಿತ ಇರುವವರು ಜೀವನಪೂರ್ತಿ ಅದನ್ನೇ ಅನುಭವಿಸಿದ್ದಾರೆ. ಅವರ ಕೈ ನೋವಾಗುತ್ತಿದೆ ದೇಹ ಬೆವರುತ್ತಿದೆ. ಆದರೂ ಕೂಡ ಇಷ್ಟು ವರ್ಷ ಅನುಭವಿಸಿದ ಎಲ್ಲ ನೋವುಗಳನ್ನು ದೇಹದ ಒಳಗೆ ತೆಗೆದುಕೊಂಡು ಜೋರಾಗಿ ಡೋಲನ್ನ ಬಡಿಯುತ್ತಿದ್ದಾರೆ. ಅವರಿಗೆ ನ್ಯಾಯ ಬೇಕಾಗಿದೆ. ತಾವು ಇಂದಿನವರೆಗೂ ನಂಬಿಕೊಂಡು ಬಂದ ಈ ಡೋಲಿನ ಶಬ್ದವಾದರೂ ಒಳಗಿನವರ ಎದೆಯೊಳಗೆ ಸಣ್ಣ ಕಂಪನವನ್ನು ಏರ್ಪಡಿಸಿದರೆ ಬದುಕು ಬದಲಾದೀತು ಅನ್ನೋದು ಅವರ ನಂಬಿಕೆ. ಸೂರ್ಯ ಹುಟ್ಟಿ ಮುಳುಗಿ ಮರುದಿನ ಹುಟ್ಟುವುದಕ್ಕೆ ತಯಾರಾಗುತ್ತಿದ್ದಾನೆ. ಡೋಳಿನ ಶಬ್ದ ಹೆಚ್ಚಾಗಿದೆ. ಒಳಗಿನ ಅಧಿಕಾರಿಗಳು ಕೆಲಸ ಮುಗಿಸಿ ಮನೆಗೆ ತೆರಳಿ ಮತ್ತೆ ಕೆಲಸ ಆಗಮಿಸಿದ್ದಾರೆ.ಇವರ ಕೆಲಸವಾಗುವ ಸೂಚನೆ ಸೂರ್ಯನ ಜೊತೆಗೆ ಮೂಡುತ್ತದೋ ಇಲ್ಲವೋ ಗೊತ್ತಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ