ಸ್ಟೇಟಸ್ ಕತೆಗಳು (ಭಾಗ ೧೦೪೮)- ಕಿವಿ
ನೀನು ಸುಮ್ಮನೆ ಸಾಗ್ತಾ ಇದ್ದೀಯ. ಸುತ್ತಮುತ್ತ ಗಮನಿಸುವ ಸಣ್ಣ ವಿವೇಚನೆಯೂ ನಿನ್ನಲ್ಲಿಲ್ಲ. ನೀನು ಸರಿಯಾಗಿ ನೋಡಿದ್ದೀಯಾ? ನಿನ್ನ ಸುತ್ತಮುತ್ತ ಸೇರಿರುವ ಹಲವು ಜನ ನಿನ್ನ ಸಾವಿಗೆ ನಿನ್ನ ನಾಶಕ್ಕೆ ವಿವಿಧ ರೀತಿಯಲ್ಲಿ ಹೊಂಚು ಹಾಕ್ತಾ ಇದ್ದಾರೆ? ಅವರ ಮುಖದಲ್ಲಿ ಕಾಣುತ್ತಿಲ್ಲ, ಅವರ ಮಾತಿನಲ್ಲಿ ಗೊತ್ತಾಗ್ತಾ ಇಲ್ಲ? ಆದರೂ ಅದು ನಿನ್ನ ಅಂತ್ಯದ ಸೂಚನೆಯನ್ನು ನೀಡುತ್ತಾ ಇದೆ . ಅದ್ಯಾವುದೋ ಆಟವನ್ನು ದೊಡ್ಡದಾಗಿ ಬಿಂಬಿಸುತ್ತಾರೆ, ಕುಳಿತಲ್ಲಿಯೇ ಕೋಟಿಗಟ್ಟಲೆ ದುಡ್ಡು ಮಾಡಬಹುದು ಅನ್ನೋದನ್ನ ತಿಳಿಸುತ್ತಾರೆ ,ಆಟದೊಳಗೆ ಇಳಿದ ಮೇಲೆ ಗೊತ್ತಾಗೋದು, ಜೀವನ ನರಕಕ್ಕೆ ಹತ್ತಿರವಾಗಿದೆ ಅಂತ. ಇನ್ಯಾವುದನ್ನು ತಿನ್ನೋದಕ್ಕೆ ಹೇಳುತ್ತಾರೆ, ಕೆಲವೊಂದನ್ನು ಕುಡಿಯುವುದಕ್ಕೆ ಹೇಳುತ್ತಾರೆ ಅವರಿಗೆ ಅವರ ಜೀವನ ಸಾಗಿಸುವುದಕ್ಕೆ ಬೇಕಾದಷ್ಟು ಸಿಗುತ್ತದೆ. ನಿನ್ನ ಜೀವನ ನಾಶವಾದರೆ ಮತ್ತೆ ಅದನ್ನು ಸರಿಪಡಿಸುವುದಕ್ಕೆ ಅವರು ಯಾರು ಬರೋದೇ ಇಲ್ಲ. ನೀನು ಬಲಿಯಾಗ್ತಾ ಇದ್ದೀಯ ಮೋಸ ಹೋಗ್ತಾ ಇದೀಯ ನೀನು ಎಚ್ಚರಾಗಬೇಕು. ಇಲ್ಲವಾದರೆ ನಿನ್ನ ಅಂತ್ಯವನ್ನು ನೀನಾಗಿಯೇ ತಂದುಕೊಳ್ಳಬೇಕಾಗುತ್ತೆ. ಹೀಗೆ ಅವನು ಎಲ್ಲರ ಮನೆ ಮನೆಗಳಿಗೆ ಹೋಗಿ ಬಾಗಿಲು ಬಡಿದು ಗಂಟಲು ಹರಿದು ಹೇಳುತ್ತಿದ್ದ. ಅವನು ಅವನ ಮನೆಯ್ನ ಕಳೆದುಕೊಂಡಿದ್ದ, ಬೇರೆಯವರು ಮನೆ ಮಸಣವಾಗಬಾರದು ಅನ್ನುವ ಕಾರಣಕ್ಕೆ ಆತನ ಕೆಲಸ ನಿರಂತರವಾಗಿ ಸಾಗುತ್ತಲೇ ಇದೆ. ಆದರೆ ಕೇಳುವ ಕಿವಿಗಳಿಲ್ಲ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ