ಸ್ಟೇಟಸ್ ಕತೆಗಳು (ಭಾಗ ೧೦೫೨)- ಹಾಡುಗಾರ
ಆ ಮರದ ಕೆಳಗೆ ಕುಳಿತವನು ಹಾಡುತ್ತಾನೆ. ಆ ಹಾಡು ಕೇಳಿದ್ರೆ ದೂರ ಹೋಗಿರುವ ಹಕ್ಕಿಗಳೆಲ್ಲಾ ಹತ್ತಿರ ಬಂದು ಕುಳಿತುಕೊಳ್ಳುತ್ತವೆ. ಎಲ್ಲರೂ ಮತ್ತೆ ಮತ್ತೆ ಅದನ್ನ ಕೇಳಬೇಕು ಅಂತ ಬಯಸುತ್ತಾರೆ. ಆದರೆ ಇವತ್ತಿನವರೆಗೂ ಆತ ಯಾವುದೇ ವೇದಿಕೆ ಹತ್ತಿಲ್ಲ. ಆತನಿಗೇನೂ ಪ್ರಚಾರ ಸಿಕ್ಕಿಲ್ಲ. ಆತ ಯಾರು ಅನ್ನೋದು ಯಾರಿಗೂ ಗೊತ್ತಿಲ್ಲ. ನನಗೆ ಅವನ ಹಾಡು ಕೇಳಿ ತುಂಬಾ ಇಷ್ಟ ಆಯ್ತು. ಹಾಗಾಗಿ ಅವನನ್ನ ಜಗತ್ತಿಗೆ ಪರಿಚಯಿಸಬೇಕು ಅಂತ ಅವನು ಹಾಡುವ ಪುಟ್ಟ ತುಣುಕುಗಳನ್ನ ತೆಗೆದು ಹಾಗೆ ಹಂಚಿಬಿಟ್ಟೆ. ಕೆಲವು ದಿನಗಳ ನಂತರ ಆತ ಮಂಕಾಗಿ ಹಾಡುವುದನ್ನೇ ನಿಲ್ಲಿಸಿಬಿಟ್ಟ. ಸುಮ್ಮನೆ ಕೇಳುವುದಕ್ಕೆ ಹೋದರೆ ಸರ್, ನನ್ನಷ್ಟಕ್ಕೆ ನಾನು ಮನಸ್ಸಿಗೆ ಇಷ್ಟವಾಗುವ ತರ ಹಾಡ್ತಾ ಇದ್ದೆ ಅದನ್ನ ಯಾರೋ ಇಡೀ ಜಗತ್ತಿಗೆ ಪ್ರಚಾರ ಮಾಡಿ, ಊರ ಜನ ನನ್ನ ಮುಂದೆ ಬಂದು ನಿಲ್ಲುವ ಹಾಗೆ ಮಾಡಿಬಿಟ್ರು. ನಾನು ನನ್ನಿಷ್ಟಕ್ಕೆ ಹಾಡ್ತಾ ಇದ್ದದ್ದು, ಅವರಿಷ್ಟಕ್ಕೆ ನಾನು ಹಾಡಬೇಕು ಅಂತ ಅವರು ಬಯಸ್ತಾರಲ್ವಾ, ಅದು ತಪ್ಪು ತಾನೇ? ನಾನು ಪ್ರಚಾರ ಬಯಸಿದವನಲ್ಲ ನನ್ನ ಮನಸ್ಸಿನೊಳಗೆ ಅನ್ನಿಸಿದ ಭಾವಗಳಿಗೆ ಒಂದಷ್ಟು ಸ್ವರ ನೀಡಿ ಹೊರಹೊಮ್ಮಿಸುತ್ತೇನೆ. ಹಾಗಾಗಿ ನನ್ನ ವೈಯಕ್ತಿಕತೆಗೆ ತೊಂದರೆ ಕೊಡುವುದು ಸರಿಯಲ್ಲ ಅಂತ ಅಂದುಕೊಳ್ಳುತ್ತೇನೆ. ಅಂತಂದು ಅಲ್ಲಿಂದ ಎದ್ದು ಹೋದವ ಆ ನಂತರ ಆ ಊರಲ್ಲಿ ಕಾಣಿಸಿಕೊಳ್ಳಲಿಲ್ಲ. ನನಗೆ ನಾನು ಮಾಡಿದ ತಪ್ಪಿನ ಅರಿವಾಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ