ಸ್ಟೇಟಸ್ ಕತೆಗಳು (ಭಾಗ ೧೦೫೪)- ಜ್ವರ

ಸ್ಟೇಟಸ್ ಕತೆಗಳು (ಭಾಗ ೧೦೫೪)- ಜ್ವರ

ಅದೊಂದು ಮೀಟಿಂಗ್, ಶೀತ, ಕೆಮ್ಮು, ಜ್ವರ ಮೂರು ಜನ ಅಲ್ಲಿ ಸೇರಿದ್ದರು, ಅವರೊಂದು ಅಜೆಂಡಾದ ಕುರಿತು ಮಾತನಾಡುತ್ತಿದ್ದರು, ಯಾರ ದೇಹದಲ್ಲಿ ಹೋಗಬೇಕು?, ಯಾವಾಗ ಹೋಗಬೇಕು? ಯಾರು ಮೊದಲು ಹೋಗಬೇಕು? ಇವೆಲ್ಲವನ್ನು ವಿಮರ್ಶೆ ಮಾಡುತ್ತಿದ್ದರು, ಅವುಗಳು ಗುರಿಯಾಗಿಸೋದು ಯಾರೆಲ್ಲ ಕೆಲಸದಲ್ಲಿ ತುಂಬಾ ನಿರತರಾಗಿರುತ್ತಾರೋ, ಯಾರ ಬದುಕಿನಲ್ಲಿ ಒಂದಷ್ಟು ಶುಭ ದಿನಗಳು ಬರಲಿದೆಯೋ, ಯಾರು ಆರೋಗ್ಯ ಎಂಬ ಬೇಲಿಯನ್ನು ಭದ್ರವಾಗಿರಿಸುವುದಿಲ್ಲವೋ, ಯಾರು ತಿಳಿದೋ ತಿಳಿಯದೇನೋ ದೇಹ ಒಪ್ಪದ ಬದಲಾವಣೆಗೆ ಒಗ್ಗುತ್ತಾರೋ, ಅಂತವರ ದೇಹಕ್ಕೆ ಒಂದು ಸಣ್ಣ ಪಿಕ್ನಿಕ್ ಹೋಗಿಬರುವ ಅಜೆಂಡಾ! ಆ ವ್ಯಕ್ತಿಯ ದೇಹಕ್ಕೆ ದೊಡ್ಡ ಮಟ್ಟದ ತೊಂದರೆ ಕೊಡದೇ ಇದ್ದರೂ, ಈ ಜಗತ್ತಿನಲ್ಲಿ ನಾವೂ ಇದ್ದೇವೆ ! ಎಂದು ಎತ್ತಿ ಹೇಳುವ ಪ್ರಯತ್ನ, ಅವರುಗಳ ಯೋಜನೆ ಹೀಗಿತ್ತು, ಮೊದಲು ಶೀತ ಹೋಗಿ ದಾಳಿ ನಡೆಸಬೇಕು, ನಂತರ ಕೆಮ್ಮು ಅದಕ್ಕೆ ಬೆಂಬಲವಾಗಿ ನಿಲ್ಲುತ್ತದೆ, ಕೊನೆಯದಾಗಿ ಜ್ವರವು ಹೋಗಿ ಉಳಿದೆರಡರ ಜೊತೆ ಒಂದಷ್ಟು ದಿನ ಆನಂದಿಸಿ, ಔಷಧಿಗಳು ಓಡಿಸಲು ಬಂದಾಗ ಹೊರಟುಹೋಗುತ್ತದೆ, ಮತ್ತೆ ಮುಂದಿನ ವ್ಯಕ್ತಿಯ ಕಡೆ, ಈಗ ನನ್ನ ದೇಹದಲ್ಲಿ ಅವುಗಳಿಗೆ ಸ್ಥಳ ಕೊಟ್ಟಿದ್ದೇನೆ, ಇನ್ನು ಸ್ವಲ್ಪ ದಿನ.. ಇವೆಲ್ಲಾ ಹೊರಟು ಹೋಗುವುದಕ್ಕಾಗಿ ಕಾಯುತ್ತಾ... ನಿಮ್ಮ ಕಡೆಗೂ ಬರಬಹುದು ಜಾಗ್ರತೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ