ಸ್ಟೇಟಸ್ ಕತೆಗಳು (ಭಾಗ ೧೦೫೫)- ಚಕ್ರ
ಅಲ್ಲೊಂದು ಚಕ್ರ ನೇತು ಹಾಕಿದ್ದಾರೆ. ಅದು ಒಂದು ಸುತ್ತು ತಿರುಗಿ ಮತ್ತದೇ ಸ್ಥಳಕ್ಕೆ ಬಂದು ಮುಂದುವರೆಯುತ್ತದೆ. ಇದು ಹಿಂದಿನಿಂದಲೂ ಹಾಗೆ ತಿರುಗುತ್ತಿದೆ ಎಂದಲ್ಲ. ಇತ್ತೀಚಿನ ಕೆಲವು ಸಮಯದಿಂದ ಹಾಗೆ ತಿರುಗುವುದಕ್ಕೆ ಆರಂಭ ಆಗಿದೆ. ಅದರ ಬುಡದಲ್ಲಿ ಕುಳಿತಿದ್ದ ದೇಹಕ್ಕೆ ಒಂದಷ್ಟು ಹೆಚ್ಚು ವಯಸ್ಸಾಗಿರುವ ವ್ಯಕ್ತಿಯೊಬ್ಬರ ಬಳಿ ಕಾರಣ ವಿಚಾರಿಸುವುದಕ್ಕೆ ಶುರುಮಾಡಿದೆ. ಅವರು ಕೊಟ್ಟ ಉತ್ತರ ಹೀಗಿತ್ತು. ಈ ಚಕ್ರ ಮೊದಲು ಹಾಗೆ ತಿರುಗುತ್ತಿರಲಿಲ್ಲ. ನಮ್ಮೂರಲ್ಲಿ ನಡೆಯುವ ಒಂದಷ್ಟು ಘಟನೆಗಳನ್ನ ಅವಲಂಬಿಸಿ ಆ ಚಕ್ರ ತಿರುಗುವುದಕ್ಕೆ ಆರಂಭ ಮಾಡ್ತಾ ಇತ್ತು. ಒಂದು ಸಮಸ್ಯೆ ಆದರೆ ಆ ಸಮಸ್ಯೆ ಆಗಿದೆ ಅನ್ನೋದನ್ನ ಬಿಂಬಿಸುವದಕ್ಕೆ ಚಕ್ರ ತಿರುಗಿ ಜನರಿಗೆ ವಿಷಯ ತಿಳಿಸುತ್ತಿತ್ತು. ಆ ಸಮಸ್ಯೆಯ ಮುಂದಿನ ಹಂತ ಏನಾಯ್ತು ಅನ್ನೋದನ್ನ ಮತ್ತೆ ಒಂದು ಒಂದಷ್ಟು ತಿರುಗಿ ವಿವರಣೆ ನೀಡುತ್ತಾ ಇತ್ತು. ಹೀಗೆ ಜನರಿಗೆ ಬದಲಾವಣೆಯ ಅರಿವು ಆಗ್ತಾನೆ ಹೋಯಿತು. ಆದರೆ ಕಾಲ ಮುಂದುವರಿತಾ ಹೋದ ಹಾಗೆ ಸಮಸ್ಯೆ ಉದ್ಭವ ಆಗುತ್ತೆ, ಇಡೀ ದೇಶದ ತುಂಬಾ ಅದರ ಪರಿಹಾರಕ್ಕೆ ಹೋರಾಟಗಳನ್ನ ಮಾಡುತ್ತಾರೆ, ತದನಂತರ ಆ ಸಮಸ್ಯೆಯನ್ನು ನಿಭಾಯಿಸುವುದಕ್ಕೆ ಅಂತ ಒಂದಷ್ಟು ತಂಡಗಳ ರಚನೆಯಾಗುತ್ತವೆ,ಆಮೇಲೆ ಜನ ಆ ಘಟನೆಯನ್ನು ಮರೆತೆ ಬಿಡುತ್ತಾರೆ. ಮತ್ತೆ ಇನ್ನೊಂದು ಘಟನೆ ಹೊಸತೊಂದು ಹುಟ್ಟುತ್ತದೆ, ಮತ್ತೆ ಜನ ಒಟ್ಟು ಸೇರ್ತಾರೆ, ಅದನ್ನ ನಿಭಾಯಿಸುವುದಕ್ಕೆ ತಂಡ ರಚನೆ ಆಗುತ್ತೆ ಜನ ಮರೆತುಬಿಡುತ್ತಾರೆ. ಇದೇ ಚಕ್ರ ಎಲ್ಲಾ ಘಟನೆಗಳಲ್ಲೂ ನಡಿತಾ ಇರುವ ಕಾರಣ ಆ ಚಕ್ರಕ್ಕೂ ಬೇಸರವೆನಿಸಿದೆ. ತಾನು ತಿರುಗಿ ಮತ್ತದೇ ಜಾಗದಲ್ಲಿ ಬಂದು ನಿಲ್ಲುವ ದುಸ್ಥಿತಿಯನ್ನು ಕಂಡು ಮರುಗಿದೆ. ಚಕ್ರಕ್ಕೆ ಬೇಸರವೆನಿಸಿದೆ, ಆದರೆ ನಮಗೆ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ