ಸ್ಟೇಟಸ್ ಕತೆಗಳು (ಭಾಗ ೧೦೫೭)- ಉರಿ
ಮೊಂಬತ್ತಿಗಳು ಉರಿಯುವುದ್ದಕ್ಕೆ ಬೇಸರಿಸಿಕೊಳ್ಳುತ್ತಿವೆ. ಮನೆಯ ಬೆಳಗುವುದ್ದಕ್ಕೆ ಅವುಗಳಿಗೆ ಒಂದಿನಿತೂ ಬೇಸರವಿಲ್ಲವಂತೆ. ಮನೆಯ ಒಳಗೆ ಕತ್ತಲಿರುವವರಿಗೆ ಬೆಳಕು ಬೇಕಾದಾಗ ಮೊಂಬತ್ತಿಗಳು ಎಲ್ಲಿದ್ದರೂ ಧಾವಿಸಿ ಬರುತ್ತವೆ ಬೆಳಕು ಚೆಲ್ಲುತ್ತವೆ. ಆದರೂ ಈಗೀಗ ತಾವು ಕರಗುವಾಗ ಬೇಸರಿಸಿಕೊಂಡು ಉರುಯುತ್ತಿವೆ,ಕಾರಣ ಕೇಳಿದ್ರೆ ನನಗೆ ಅವುಗಳ ಮಾತನ್ನ ಒಪ್ಪಬೇಕು ಅನ್ನಿಸ್ತು.
"ನೋಡಿ ಸರ್ ಪ್ರತೀ ಸಲವೂ ಅಲ್ಲಲ್ಲಿ ನಿಮ್ಮ ಪ್ರತಿಭಟನೆಗೆ ನಾವು ನೆನಪಾಗ್ತೇವೆ, ನಾವು ಉರಿದು ಕರಗುತ್ತೇವೆ, ಏನಾದರೂ ಬದಲಾವಣೆ ಸಾದ್ಯ ಆಗಿದೆಯಾ, ಅತ್ಯಾಚಾರಿಗಳು ಶಿಕ್ಷೆ ಪಡೆದರಾ ಇಲ್ಲ. ನಾವೆಲ್ಲರೂ ಸೇರಿ ಸುಟ್ಟು ಬಿಡ್ತೇವೆ ಅವಕಾಶ ಕೊಡಿ. ನೀವು ಕೈಯಲ್ಲಿ ಹಿಡಿದು ನಮ್ಮ ಕರಗಿಸಿ ಏನು ಸಾಧಿಸ್ತೀರಾ? ಅವರ ಕಾಮದ ಜೊತೆ ಕ್ರೂರ ಭಾವಗಳೆಲ್ಲವೂ ಸುಟ್ಟು ಹೋಗುವಂತಹ ಶಿಕ್ಷೆ ಕೊಡಿ ಆಗ ನಾವು ಉರಿದು ಕರಗುವುದ್ದಕ್ಕೆ ಅರ್ಥವಾದರೂ ಸಿಕ್ಕೀತು..."
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ