ಸ್ಟೇಟಸ್ ಕತೆಗಳು (ಭಾಗ ೧೦೫) - ಬದಲಾದ ಹಾಡು

ಸ್ಟೇಟಸ್ ಕತೆಗಳು (ಭಾಗ ೧೦೫) - ಬದಲಾದ ಹಾಡು

"ಕಾಡು  ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ ಬಾಡಿ ಹೋಗುವ ಮುನ್ನ ಕೀಳುವವರು ಯಾರೆಂದು "ಹಾಡು ಮೊಬೈಲ್ ಒಳಗಿಂದ ಪಿಸುಗುಡುತ್ತಿದೆ. ಅವಳ ಕಣ್ಣೀರು ರಾಗಕ್ಕನುಗುಣವಾಗಿ ಇಳಿಯುತ್ತಿತ್ತು. ನಾನಿಲ್ಲಿ ನೋಟಗಾರ ಮಾತ್ರ .ಅವಳ ಅಂತರಂಗದೊಳಗೆ ಇಳಿದು ಭಾವನೆಗಳನ್ನ  ಹೆಕ್ಕಿ ನಿಮ್ಮ ಮುಂದಿಡುವಷ್ಟು ಶಕ್ತನಲ್ಲ .

ಅಮ್ಮನಿಗೆ ಮುದ್ದಿನ ಮಗಳು, ಆದರೆ ಮಗನಷ್ಟಲ್ಲ? ಇಬ್ಬರೇ ಇದ್ದ ಕಾರಣ ಎಲ್ಲಾ ಕಡೆ ಎರಡನೆಯವಳು. ಅವಳ ಕನಸುಗಳು ಪುಸ್ತಕದೊಳಗೆ ಗೀಚು ಬಿದ್ದು ಮಾಯವಾಗುತ್ತಿದೆ. ಯಾರು ತೆರೆದು ನೋಡುವವರಿಲ್ಲ. ಮನೆಗೊಂದು ಕೆಲಸದಾಳಿನ ಬದುಕು ಅವಳದು. ತುಟಿ ಬಿರಿದು ಹಲ್ಲು ಕಂಡರೆ ಬೈಗುಳಗಳ ಸರಮಾಲೆ ಬೆನ್ನಟ್ಟುತ್ತದೆ. ಅವಳ ಅಂದದ ಮೊಗಕೆ ನಗುವಿನ ಸಿಂಗಾರ ಇದು ಬರವಣಿಗೆ ಮಾತ್ರ ಒಪ್ಪಿತವಾದದ್ದು. ಬೆಳವಣಿಗೆಯ ಹಂತವಾದ್ದರಿಂದ ಒಂದಷ್ಟು ಕಣ್ಣುಗಳು ಮನೆಯ ಮುಂದೆ ಸುತ್ತುತ್ತಿರುತ್ತದೆ. ಯಾರ ಬಳಿಯಾದರೂ ಹೇಳಿದರೆ "ನೀನ್ಯಾಕೆ ಅವನು ಮುಂದೆ ನಗ್ತಾ ಓಡಾಡ್ತಿಯಾ"?  ಕಣ್ಣೀರು ಒರೆಸಿ ಮತ್ತೆ ನಿಂತಿದ್ದಾಳೆ. ವಿರೋಧಿಗಳ ನಡುವೆ ಎದ್ದು ನಿಲ್ಲುವ ಕನಸಿದೆ. ಒಳಗಿನ ಜ್ವಾಲಾಮುಖಿ ಸ್ಫೋಟಗೊಂಡು ತ್ಯಜಿಸಿ ಹೋಗುವ ಮುನ್ನ ಭುಜದ ಮೇಲೆ ಕೈ ಹಾಕಿ, ಕಣ್ಣಲ್ಲಿ ಪ್ರೀತಿ ತುಂಬಿ ಆಪ್ತವಾಗಿ ಮಾತನಾಡಿದರೆ ನಮ್ಮಲ್ಲೊಬ್ಬಳಾಗುತ್ತಾಳೆ. ಇಲ್ಲವಾದರೆ ಅನಾಮಿಕಳಾಗಿ ಮನೆಯೊಂದರ ಒಳಗೆ ಅನ್ನಕ್ಕೆ ನೀರಿಡುತ್ತಿರುತ್ತಾಳೆ. ಮೊಬೈಲ್ ಒಳಗೆ ಹಾಡು ಬದಲಾಯಿತು. " ಹ್ಯಾಪಿ ಆಗಿದೆ, ಹ್ಯಾಪಿ ಆಗಿದೆ…

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ