ಸ್ಟೇಟಸ್ ಕತೆಗಳು (ಭಾಗ ೧೦೬೦)- ಯೋಚಿಸು

ಸ್ಟೇಟಸ್ ಕತೆಗಳು (ಭಾಗ ೧೦೬೦)- ಯೋಚಿಸು

ಮುಖ್ಯ ರಸ್ತೆಗಿಂತ ಸ್ವಲ್ಪ ದೂರ ನಡೆದು ಹೋಗಬೇಕು ಆ ಮನೆಗೆ. ಆ ಮನೆಯಲ್ಲಿ ಈಗ ಬದುಕ್ತಾ ಇರೋದು ಒಬ್ಬರೇ, ಮೊದಲು ಆ ಮನೆ ಮಗನನ್ನು ನಂಬಿದ್ದು ಈಗ ಅವನ ಫೋಟೋ ಗೋಡೆಯಲ್ಲಿ ನೇತು ಬಿದ್ದ ನಂತರ ಅವರೊಬ್ಬರೇ ದಿನ ದೂಡ್ತಾ ಇದ್ದಾರೆ. ಮಗನಿಗೆ ಸಮಾಜದಲ್ಲಿ ಒಂದಷ್ಟು ಬದಲಾವಣೆ ಮಾಡುವ ವಿಪರೀತಾಸೆ. ಅದಕ್ಕೆ ರಾಜಕೀಯಕ್ಕೆ ಇಳಿದ್ಬಿಟ್ಟಿದ್ದ. ಯಾರದೋ ಕುಮ್ಮಕ್ಕಿನಿಂದ ಆತನ ಪ್ರಾಣಪಕ್ಷಿ ಒಂದು ಗಲಬೆಯಲ್ಲಿ ಹಾರಿಯೂ ಹೋಗಿತ್ತು. ಮನೆಗೆ ಬರುವ ಪ್ರತೀ ಯುವಕರಲ್ಲಿ ಇದೇ ಮಾತು ಹೇಳುತ್ತಾರೆ. ನಿನ್ನೆ ತಾನೇ ದೊಡ್ಡ ವೇದಿಕೆಯಲ್ಲಿ ಬೇರೆ ಬೇರೆ ಪಕ್ಷದ ನಾಯಕರು ಒಬ್ಬರನ್ನೊಬ್ಬರ ಅಪ್ಪಿಕೊಂಡು ಹಾಸ್ಯ ಚಟಾಕಿ ಹಾರಿಸ್ತಾರೆ, ವಿಚಾರಿಸುತ್ತಾರೆ. ಅವರ ಒಳಗೆ ಯಾವುದೇ ದ್ವೇಷವಿಲ್ಲ. ಆದರೆ ಅವರ ಹೆಸರೂ ಹೇಳಿಕೊಂಡು ಬದುಕ್ತಾ ಇರುವಂತಹ ಕೆಲವರ್ಗದ ಜನಗಳು ದ್ವೇಷವನ್ನೇ ಉಸಿರಾಡ್ತಾ ಇದ್ದಾರೆ. ಪುಟ್ಟ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದಿರುವ ಸ್ಥಿತಿಗೆ ತಲುತ್ತಿದ್ದಾರೆ. ರಾಜಕೀಯಗಳು ಚುನಾವಣೆಗೋಸ್ಕರ ಮಾತ್ರ ನಡೆದರೆ ಒಳ್ಳೆಯದು. ಮತ್ತೆ ಬದುಕೇ ರಾಜಕೀಯವಾಗಿ ಬಿಡಬಾರದು. ನಾಯಕರ ಬದುಕು ದಿನದಲ್ಲಿ ಬದಲಾಗಿಬಿಡುತ್ತದೆ. ಯುವ ಮನಸ್ಸುಗಳಲ್ಲಿ ಕಟ್ಟಿಕೊಂಡ ದ್ವೇಷಗಳು ಕೊನೆಯವರೆಗೂ ಉಳಿದುಬಿಡುತ್ತವೆ. ಇವರಿಗೆ ಅರ್ಥವಾಗುವುದು ಯಾವಾಗಲೂ. ಬಂದವರಿಗೆ ನೀರು ಬೆಲ್ಲದ ಜೊತೆ ಒಳ್ಳೆಯ ಮಾತನ್ನು ಹೇಳಿ ಕಳಿಸುತ್ತಾರೆ. ತಾನು ಅನುಭವಿಸಿದ್ದನ್ನ ಬೇರೆ ಯಾರು ಅನುಭವಿಸಬಾರದು ಅನ್ನೋದಕ್ಕೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ