ಸ್ಟೇಟಸ್ ಕತೆಗಳು (ಭಾಗ ೧೦೭೦)- ವೇಷ

ಸ್ಟೇಟಸ್ ಕತೆಗಳು (ಭಾಗ ೧೦೭೦)- ವೇಷ

ತಾಸೆಯ ಪೆಟ್ಟಿಗೆ ಹೆಜ್ಜೆಗಳು ನಿಲ್ಲುತ್ತಿಲ್ಲ. ಮತ್ತೆ ಮತ್ತೆ ಕುಣಿಯಬೇಕು ಅಂತ ಬಯಸ್ತಾ ಇದೆ. ದೇಹದಲ್ಲಿ ಬಳಿದುಕೊಂಡಿರುವ ಕೆಂಪು ಹಳದಿ ಕಪ್ಪು ಬಣ್ಣಗಳು ನೋಡುವವರಿಗೆ ರಂಜಿಸುವ ಹಾಗೆ ಇಡೀ ದೇಹವನ್ನು ಕುಣಿಸುತ್ತಾ ನರ್ತನವನ್ನು ಮಾಡ್ತಾ ಎಲ್ಲರ ಎದೆಯೊಳಗೆ ತಾಳದ ಕಂಪನವನ್ನು ಏರ್ಪಡಿಸಿ ಒಮ್ಮೆ ಎಲ್ಲರೂ ಇತ್ತ ತಿರುಗಿ ನೋಡುವಂತೆ ಮಾಡುವುದೇ ಹುಲಿವೇಷ. ಅವರದೊಂದು ಪುಟ್ಟ ತಂಡ ದೇವರಿಗೆ ಹರಕೆ ರೂಪದಲ್ಲಿ ಆರಂಭವಾದದ್ದು ಈಗಲೂ ಹಾಗೆ ಮುಂದುವರಿಸಿದ್ದಾರೆ. ಹಿಂದಿನ ದಿನದಿಂದ ಬಣ್ಣ ಹಚ್ಚಿ ಮರುದಿನ ಮುಂಜಾವಿನಿಂದ ಅಲ್ಲಲ್ಲಿ ಊರೂರು ತಿರುಗಾಡುತ್ತಾ  ಯಾವುದೋ ಒಳಿತಿಗೆ ದುಡ್ಡು ಸಂಗ್ರಹ ಮಾಡ್ತಾ ರಾತ್ರಿಯದರೆ ಸಾಕು ಉದ್ದವಾದ ಕೋಣೆಯೊಳಗೆ ವಿಶ್ರಾಂತಿ ಪಡಿತಾರೆ. ಮತ್ತೆ ಮರುದಿನ ನರ್ತನ ಸೇವೆ ಮುಂದುವರೆಯಬೇಕು. ಇಡೀ ದಿನ ಕುಣಿದ ದೇಹ ಆ ಕ್ಷಣಕ್ಕಾಗುವಾಗ ವಿರಾಮವನ್ನು ಬಯಸಿದರೂ ಸಹ ದೇಹದ ಎಲ್ಲ ಭಾಗಗಳು ವಿಪರೀತ ನೋವು ನೀಡುತ್ತವೆ. ಒಳಗೆ ತಡೆದುಕೊಳ್ಳಲಾರದಷ್ಟು ದೇಹದ ಭಾಗಗಳೆಲ್ಲವೂ ಹೆದರಿ ಹೋಗಿರುತ್ತವೆ, ಪಾದಗಳ ನೋವಿನಿಂದ ಅಳುತ್ತಿರುತ್ತವೆ. ಇಡೀ ದೇಹ ನೆಲದ ಮೇಲಕ್ಕೊರಗಿದ್ದರು ಸಹ ಮತ್ತೆ ಮತ್ತೆ ದೇಹ ವಿಶ್ರಾಂತಿಯನ್ನು ಅಪ್ಪಿಕೊಳ್ಳುತ್ತದೆ. ಆರೋಗ್ಯ ಕೈ ಕೊಡುತ್ತೆ, ನಡೆಯುವುದಕ್ಕೂ ಪರದಾಡುವಂತಹ ಕಷ್ಟ ಅವರದಾಗಿರುತ್ತದೆ. ಮತ್ತೆ ಮುಂಜಾನೆ ಆದರೆ ಮತ್ತೆ ತಾಸೆಯ ಪೆಟ್ಟಿಗೆ ದೇಹ ತಯಾರಾಗಿ ನರ್ತನ ಸೇವೆ ಮುಂದುವರಿತದೆ. ಈ ಎಲ್ಲಾ ಸನ್ನಿವೇಶಗಳ ನಡುವೆ ನೀ ನಡೆದಾಗ ಮಾತ್ರ ನಿನಗೂ ಅವರ ದಿನದ ಕಷ್ಟ ಅರ್ಥವಾಗುತ್ತದೆ. ಯಾವುದೇ ಕಲೆಯಾದರೂ ಅದು ಬರಿಯ ಆಚರಣೆಯ ಚೌಕಟ್ಟಿನ ಸಂಭ್ರಮಕ್ಕಲ್ಲದೆ ಬದುಕು ಮೀರಿದ ಒಂದು ಅನುಭವವನ್ನು ನೀಡುತ್ತದೆ. ನೀನು ಅದನ್ನು ಅರ್ಥ ಮಾಡಿಕೊಳ್ಳಬೇಕು. ಹೀಗೆಂದರು ಎಪ್ಪತ್ತೆರಡು ವಯಸ್ಸಿನ ಸುರೇಶರು. ವೇಷ ಕೇವಲ ಸಂಭ್ರಮಕ್ಕೆ ಎಂದುಕೊಂಡಿದ್ದವನಿಗೆ ಅವರ ಮಾತು ನಿಜವನ್ನ ಮತ್ತೊಮ್ಮೆ ಅರ್ಥ ಪಡಿಸಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ