ಸ್ಟೇಟಸ್ ಕತೆಗಳು (ಭಾಗ ೧೦೭೫)- ಗಣಪತಿ
ಗಣಪತಿ ಹೊರಡುವುದಕ್ಕೆ ತಯಾರಾಗಿದ್ದಾನೆ. ಆತನಿಗೆ ವಿಪರೀತ ಸಂಭ್ರಮ. ಏಕೆಂದರೆ ಅಲ್ಲೊಂದು ಕಡೆ ವಿದ್ಯಾರ್ಥಿಗಳು ಸೇರಿಕೊಂಡು ಆತನನ್ನು ಸಂಭ್ರಮದಿಂದ ಮೆರೆಸುತ್ತಾರೆ. ಅದಕ್ಕೆ ತಯಾರಿಗಳು ತಿಂಗಳ ಹಿಂದೆಯೇ ಆರಂಭವಾಗಿರುತ್ತೆ. ಪ್ರತಿ ತರಗತಿಯ ವಿದ್ಯಾರ್ಥಿಗಳು ತಾವೇ ಇಷ್ಟಪಟ್ಟು ಗಣಪತಿಯನ್ನು ಮೂರು ದಿನ ಆರಾಧಿಸಿ ಆತನನ್ನು ಮೆರವಣಿಗೆ ಮಾಡುತ್ತಾರೆ. ಆ ಸಂಭ್ರಮವನ್ನು ಕಂಡು ಎಲ್ಲರನ್ನು ಹಾರೈಸಿ ಹೊರಡಬೇಕು ಅನ್ನೋದು ಗಣಪತಿಯ ಆಸೆ. ಹಾಗೆ ಒಂದು ಸಲ ದೃಷ್ಟಿ ಹಾಯಿಸಿದವನಿಗೆ ಅಂತಹ ದೊಡ್ಡ ತಯಾರಿ ಆಗುತ್ತಾ ಇರೋದೇನೂ ಕಂಡಿರಲಿಲ್ಲ. ಯಾಕೆ? ಈ ಸಲ ಏನಾದರೂ ಸಮಸ್ಯೆ ಆಯಿತಾ? ಅಂತ ಅಂದುಕೊಂಡ. ಒಂದಷ್ಟು ಶಕ್ತಿ ನೀಡಬೇಕು ಅನ್ನೋ ಕಾರಣಕ್ಕೆ ಎಲ್ಲರಿಗೂ ಆಶೀರ್ವಾದವನ್ನು ನೀಡಿದ. ನಿನ್ನೆಯವರೆಗೂ ಏನಾಗುತ್ತೆ ಅಂತ ಅಂದುಕೊಂಡಿದ್ದವರಿಗೆ ಒಂದೇ ದಿನದಲ್ಲಿ ಅದ್ಭುತವಾದ ಬದಲಾವಣೆಗಳು ಕಂಡು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಕೆಲಸಗಳು ಮುಕ್ತಾಯದ ಹಂತಕ್ಕೆ ಬಂದವು. ಎಲ್ಲರಿಗೂ ಗೊತ್ತಿತ್ತು ಗಣಪತಿ ಜೊತೆಗೆ ನಿಲ್ತಾನೆ ಅಂತ. ಗಣಪತಿ ಗಟ್ಟಿಯಾಗಿ ನಿಂತುಬಿಟ್ಟಿದ್ದ. ಹಾಗಾಗಿ ಈಗ ಗಣಪತಿಗೂ ಇನ್ನೊಂದಷ್ಟು ಹೆಚ್ಚು ಖುಷಿ. ಗಣಪತಿ ಹೊರಡಲು ತಯಾರಾಗಿದ್ದಾನೆ. ಮಕ್ಕಳು ಆತನನ್ನು ಸ್ವಾಗತಿಸಲು ತಯಾರಾಗಿದ್ದಾರೆ. ಇಬ್ಬರ ಮುಖಾಮುಖಿಗೆ ಗಂಟೆಗಳಷ್ಟೇ ಬಾಕಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ