ಸ್ಟೇಟಸ್ ಕತೆಗಳು (ಭಾಗ ೧೦೮೪)- ಮೂಲ

ಸ್ಟೇಟಸ್ ಕತೆಗಳು (ಭಾಗ ೧೦೮೪)- ಮೂಲ

ರಾಮರಾಯರು ತುಂಬಾ ಯೋಚನೆಯಲ್ಲಿ ಹಾಗೆ ಗೋಡೆಗೊರಗಿ ಕುಳಿತುಬಿಟ್ಟಿದ್ದರು. ಅವರನ್ನು ಯಾವತ್ತೂ ಹಾಗೆ ನೋಡಿದವರಲ್ಲ ಅವರ ಜೀವದ ಗೆಳೆಯ ಭೀಮರಾಯರು. "ನನ್ನ ಮಕ್ಕಳು ಹೀಗೆ ಆಗ್ತಾರೆ ಅಂತ ಅಂದುಕೊಂಡಿರಲೇ ಇಲ್ಲ. ಊರಲ್ಲೇ ಬೆಳೆದು ಓದಿ ಒಳ್ಳೆಯ ವಿದ್ಯೆ ಪಡೆದವರು ಊರು ಬಿಡೋದ್ದಕೆ ಸಿದ್ಧವಾಗಿದ್ದಾರೆ. ಈ ನೆಲವನ್ನು ನಂಬಿದವರು ಮಾರಾಟ ಮಾಡಿ ದೇಶ ಬಿಡುವುದಕ್ಕೆ ಯೋಚನೆ ಮಾಡ್ತಾ ಇದ್ದಾರೆ. ಅವರ ಶಿಕ್ಷಣಕ್ಕೆ ಅವರ ಬದುಕಿಗೆ ಮಾಡಿದ ಎಲ್ಲ ಸಾಲಗಳನ್ನ ಹಾಗೆಯೇ ನನ್ನ ತಲೆ ಮೇಲೆ ಇಟ್ಟು ಅವರು ಭಾರ ಇಳಿಸಿಕೊಂಡಿದ್ದಾರೆ. ಕಾರಣ ಕೇಳಿದರೆ ಜವಾಬ್ದಾರಿ ನಿಮ್ದಲ್ವಾ ಅಂತಾರೆ. ಈಗ ಮಾತೆತ್ತಿದರೆ ಅದೇನು ಖರ್ಚು ಮಾಡಿದಿರಿ ಲೆಕ್ಕ ಕೊಡಿ, ವಾಪಸ್ ಕೊಡ್ತೀವಿ ಅಂತ ಹೇಳ್ತಾ ಇದ್ದಾರೆ. ಇಂತಹ ಮಕ್ಕಳು ಹೀಗಾಗ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ. ಇಲ್ಲ ಗೆಳೆಯ, ಇದು ನಿನ್ನ ತಪ್ಪಲ್ಲ ನೀನವರನ್ನು ಸಣ್ಣಗಿರುವಾಗಲೇ ಬೆಳೆಸಿದ ವಿಧಾನ ತಪ್ಪು. ಅವರಿಗೆ ನಿನ್ನ ಜೀವನದ ಪ್ರತಿಯೊಂದು ಕಷ್ಟವನ್ನ ಹೇಳಿಲ್ಲ, ನಿನಗಾದ ಮಾನಸಿಕ ಹಿಂಸೆಯನ್ನು ಅವರಿಗೆ ವಿವರಿಸಲೇ ಇಲ್ಲ. ಅವರ ಮುಂದೆ ಪ್ರತಿದಿನವೂ ನಗುವಿನ ಮುಖ ಧರಿಸಿ ಬದುಕೋದಕ್ಕೆ ಪ್ರಾರಂಭ ಮಾಡಿದೆ ಅನ್ನುವ ಸುದ್ದಿಯನ್ನು ತಿಳಿಸಲಿಲ್ಲ. ನಿನ್ನ ಸಾಲದ ಪ್ರಪಾತದ ಅರಿವು ಮೂಡಿಸಲೇ ಇಲ್ಲ ಇದ್ಯಾವುದು ಮಾಡದೆ ಹೋದಾಗ ಅವರು ಅದನ್ನ ತಿಳಿದುಕೊಳ್ಳುವುದೇ ಇಲ್ಲ. ಹಾಗಾಗಿ ನಿನ್ನ ಬದುಕು ಖಂಡಿತ ಅವರಿಗೆ ಹೇಳಿಬಿಡು ತಂದೆ ತಾಯಿಗಳ ಬದುಕು ಮಕ್ಕಳ ಮುಂದೆ ತೆರೆದಿಟ್ಟ ಪುಸ್ತಕದಂತಿರಬೇಕು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ