ಸ್ಟೇಟಸ್ ಕತೆಗಳು (ಭಾಗ ೧೦೮೬)- ದೇವರು

ಸ್ಟೇಟಸ್ ಕತೆಗಳು (ಭಾಗ ೧೦೮೬)- ದೇವರು

ಬಿಳಿ ದೇವರು, ಕೇಸರಿ ದೇವರು, ಹಸಿರು ದೇವರು ಒಂದು ಕಡೆ ಒಟ್ಟಾಗಿ ಕುಳಿತು ಮಾತನಾಡುತ್ತಿದ್ದರು. ಅಲ್ಲಾ ಈ ಜನಕ್ಕೆ ಏನು ಹೇಳೋದು? ನಾವು ಈ ಜನರ ಒಳಿತಿಗಾಗಿ ಮೂರು ರೂಪಗಳಲ್ಲಿ ಅವರಿಗೆ ಕಾಣಿಸಿಕೊಂಡರೆ ಅವರು ನಾವು ಕಾಣಿಸಿಕೊಂಡ ರೂಪವೇ ದೊಡ್ಡದು ಅಂತ ಅಹಂಕಾರ ಕೊಚ್ಚಿಕೊಳ್ಳುವುದಕ್ಕೆ ಪ್ರಾರಂಭ ಮಾಡುತ್ತಾರೆ. ಅಲ್ಲದೆ ನಾವು ಒಂದೇ ಅಂಶ ಅಂತ ತಿಳಿಯದೇ ಒಬ್ಬರಿಗೊಬ್ಬರು ಕಚ್ಚಾಡ್ತಾರೆ. ಇನ್ನೊಬ್ಬರನ್ನ ಸಾಯಿಸುವ ಮಟ್ಟಕ್ಕೆ ಹೋಗಿಬಿಡುತ್ತಾರೆ. ನಮ್ಮೂವರಲ್ಲಿ ಯಾರನ್ನಾದರೂ ಮೆರವಣಿಗೆ ಮಾಡ್ತಾ ಇದ್ರೆ ಇನ್ನೊಬ್ಬರು ಬಂದು ಕಲ್ಲು ಹೊಡಿತಾರೆ, ಇನ್ನೊಬ್ಬರು ಮೆರವಣಿಗೆ ಹೋಗದ ಹಾಗೆ ನಾವು ಮಾಡುತ್ತೇವೆ ಅಂತ ದೊಡ್ಡದಾಗಿ ಭಾಷಣ ಮಾಡ್ತಾರೆ. ನಮ್ಮನ್ನ ಅರ್ಥ ಮಾಡಿಕೊಳ್ಳದಿರುವುದೇ ವಿಪರ್ಯಾಸ. ಇವರಿಗೆ ನಾವು ಹೇಗೆ ತಿಳಿಸಿ ಹೇಳೋದು. ನಾವೇ ಇವರ ಮುಂದೆ ಅವತರಿಸಿ ನಿಂತರೂ ಇವರು ನಂಬುವ ಸ್ಥಿತಿಯೇ ಇಲ್ಲ. ನಾವು ಕೊಟ್ಟ ಬುದ್ಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಏನೊಂದು ತಿಳಿತಾ ಇಲ್ಲ? ಅವರ ಮಾತುಕತೆ ಮುಂದುವರಿತಾ ಇತ್ತು. ಇಲ್ಲಿ ಕೇಸರಿ ಬಿಳಿ ಹಸಿರುಗಳ ಜಗಳ ತಾರಕಕ್ಕೆ ಏರಿತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ