ಸ್ಟೇಟಸ್ ಕತೆಗಳು (ಭಾಗ ೧೦೮೭)- ಸರಪಣಿ
ಜನರ ಹಕ್ಕಿನ ಸಂರಕ್ಷಣೆಯ ಪ್ರಜಾಪ್ರಭುತ್ವದ ಉಳಿಸುವಿಕೆಗೆ ದೊಡ್ಡ ಕಾರ್ಯಕ್ರಮದ ಆಯೋಜನೆಯಾಗಿತ್ತು. ದೊಡ್ಡವರ ಮುಂದೆ ನಮ್ಮ ಜಿಲ್ಲೆ ಅದ್ಭುತ ಅಂತಾ ಬಿಂಬಿಸಿಕೊಳ್ಳಬೇಕಿತ್ತು. ಆ ಕಾರಣಕ್ಕೆ ಹಲವು ಸಾವಿರ ಜನರ ಮಾನವ ಸರಪಣಿ ಕಾರ್ಯಕ್ರಮ ಯೋಜನೆಯೂ ಆಗಿತ್ತು. ಉದ್ದೇಶ ಪ್ರಜಾ ಪ್ರಭುತ್ವ ಉಳಿಸಬೇಕೆನ್ನುವುದು. ಜನ ಸೇರಿಸುವಿಕೆ ಹೇಗೆ ಎನ್ನುವುದು ಪ್ರಶ್ನೆಯಾದಾಗ ಸುತ್ತಮುತ್ತಲಿನ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳನ್ನ ಕಡ್ಡಾಯಾವಾಗಿ ಹಾಜರಾಗಬೇಕೆಂದು ತಾಕೀತು ಮಾಡಲಾಯಿತು. ಎಲ್ಲ ಮೂಲಗಳಿಂದಲೂ ಒತ್ತಡವನ್ನ ಹೇರಿ ಒಟ್ಟಿನಲ್ಲಿ ಒಂದೆಡೆಯಿಂದ ಇನ್ನೊಂದೆಡೆಯವರೆಗೆ ಸರತಿ ಸಾಲಿನಲ್ಲಿ ರಜಾದಿನದಂದು ಸೇರಿಸಲಾಯಿತು. ಬಂದ ಮಕ್ಕಳು ಕಾದದ್ದೇ ಬಂತು... ಕಾರ್ಯಕ್ರಮ ಆರಂಭ ಮತ್ತು ಅಂತ್ಯ ಯಾರಿಗೂ ತಿಳಿಯಲೇ ಇಲ್ಲ. ಹಲವು ಗಂಟೆಗಳ ನಂತರ ಹೊರಡಿ ಎನ್ನುವ ಆದೇಶ ಬಂತು. ಸೇರಿದವರ ಯಾರ ಮನಸ್ಸಿನಲ್ಲೂ ಪ್ರಜಾಪ್ರಭುತ್ವ ಉಳಿಸುವ ಸಂದೇಶದ ಬೀಜ ಮೊಳಕೆಯೊಡೆಯಲೇ ಇಲ್ಲ. ಸರ್ವಾಧಿಕಾರಿ ಧೋರಣೆಯೇ ಕಾಣುತ್ತಿತ್ತು. ಹೆಸರಿಗಾಗಿ ಮಾಡಿದ ಕಾರ್ಯಕ್ರಮ ಯಾರ ಮನಸ್ಸಿನಲ್ಲೂ ಹೆಸರುಳಿಸದೇ ಮಾಯವಾಗಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ