ಸ್ಟೇಟಸ್ ಕತೆಗಳು (ಭಾಗ ೧೦೯೦)- ಒಳಿತು ಕೆಡುಕು

ಸ್ಟೇಟಸ್ ಕತೆಗಳು (ಭಾಗ ೧೦೯೦)- ಒಳಿತು ಕೆಡುಕು

ತಪ್ಪು ಮಾಡಿ ಸಿಕ್ಕಿಬಿದ್ದಿದ್ದ. ಮನೆಯಲ್ಲಿ ಆ ಕಾರಣಕ್ಕೆ ಒಂದಷ್ಟು ಮಾತುಗಳನ್ನು ಕೇಳಬೇಕಾಗಿತ್ತು. ಮನೆಯ ಎಲ್ಲಾ ಮಾತುಗಳನ್ನ ಕೇಳಿ ರೋಸಿ ಹೋಗಿ ಅಂಗಳದಲ್ಲಿ ಬಂದು ನಿಂತು ಬಿಟ್ಟ. ಒಳಗೆ ಮನೆಯವರೆಲ್ಲ ಕೇಳುತ್ತಿದ್ದ ಪ್ರಶ್ನೆಗಳಿಗೆ ಹೊರಗೆ ನಿಂತು ಜೋರಿನಲ್ಲಿ ಉತ್ತರಿಸಲಾರಂಭಿಸಿದ. ಎಲ್ಲವೂ ನನ್ನದೇ ತಪ್ಪಲ್ಲ. ನನ್ನ ಸುತ್ತಮುತ್ತ ನಿಂತವರು ನನ್ನನ್ನು ಪ್ರೋತ್ಸಾಹಿಸಿದವರು ಎಲ್ಲರದು ತಪ್ಪಿದೆ. ಕೆಟ್ಟದ್ದನ್ನೇ ತುಂಬಿಸುವವರು ಸುತ್ತ ಸಾವಿರ ನಿಂತಾಗ ನಾವು ಹೇಗೆ ಅವರ ನಡುವೆ ಒಳ್ಳೆಯವರಾಗಿ ಬದುಕೋದು. ಹಾಗೆ ಒಳ್ಳೆಯವರಾಗ್ತಾ ಹೋದ್ರೆ ಬದುಕೋಕೆ ಸಾಧ್ಯವಿಲ್ಲದ ಸ್ಥಿತಿಗೆ ಬಂದು ತಲುಪಿ ಬಿಡ್ತೇವೆ. ಅಂತಂದು ನೆಲವನ್ನ ಕಾಲಿನಿಂದ ಜೋರಾಗಿ ಒದ್ದು ಸೀದಾ ಅಂಗಡಿಯ ಕಡೆಗೆ ನಡೆದುಬಿಟ್ಟ ಅವನು. ಆಗ ಅವನಿಂದ ತುಳಿಸಿಕೊಂಡ ಭೂಮಿ ಮಾತಾಡಿತು. ನಾನು ನನ್ನ ಭೂಮಿಯಲ್ಲಿ ಹಲವಾರು ಜನರನ್ನ ಸುಟ್ಟು ಹಾಕಿದ್ದೇನೆ. ಅವರ ಜೀವನದ ಕೊನೆಯಾದ ಮೇಲೆ ಮಣ್ಣಲ್ಲಿ ಹೂತು ಮಣ್ಣಾಗಿಸಿದ್ದೇನೆ .ಅವರಲ್ಲಿ ಕೆಟ್ಟವರು ಒಂದಷ್ಟು ಮಂದಿ.ಒಳ್ಳೆಯವರು ಇನ್ನೊಂದಷ್ಟು ಮಂದಿ. ನನ್ನ ಮಣ್ಣಿನ ಸತ್ವವು ಕೆಟ್ಟವರು ಒಳ್ಳೆಯವರನ್ನ ಅಳೆದು ಹೋಗಿ ಕೆಟ್ಟದ್ದು ಒಳ್ಳೆಯದು ನನ್ನಿಂದ ಆಗಬೇಕಿತ್ತು. ಆದರೆ ನಾನು ಯಾವತ್ತೂ ನನ್ನನ್ನ ನಂಬಿ ಬೆಳೆಯುವವರಿಗೆ ಕೆಟ್ಟದ್ದನ್ನು ಬಯಸಿದವನಲ್ಲ. ಹಾಗಿರುವಾಗ ನನ್ನ ಜೊತೆಗೆ ಬಂದವರನ್ನು ಒಳ್ಳೆಯವರನ್ನಾಗಿ ಪರಿವರ್ತಿಸಿದ್ದೇನೆ. ನನ್ನಿಂದ ಸಾಧ್ಯವಾಗುವುದು ನಿನ್ನಿಂದಲೂ ಸಾಧ್ಯವಾಗುತ್ತದೆ. ನೀನು ಅವರ ದಾರಿಗೆ ಹೋಗಬೇಕೆಂದಿಲ್ಲ ನಿನ್ನ ದಾರಿಗೆ ಅವರನ್ನೇ ಸೇರಿಸಿಕೊಂಡುಬಿಡಬಹುದು. ಹೀಗಂದ ಮಣ್ಣು ಮೌನವಾಯಿತು. ಮಣ್ಣಿನ ಭಾಷೆ ಕಂಪನದ ಮೂಲಕ ಅವನ ಪಾದವನ್ನು ತಲುಪಿ ಅಲ್ಲಿಂದ ತಲೆಗೂ ಹೊಕ್ಕಿರಬಹುದು. ಅದನ್ನು ನೀರು ಹಾಕಿ ಗೊಬ್ಬರ ಸುರಿದು ಮರವಾಗಿ ಬೆಳೆಸುತ್ತಾನೆ ಚಿವುಟಿ ಹಾಕ್ತಾನೋ ಕಾದು ನೋಡಬೇಕು

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ