ಸ್ಟೇಟಸ್ ಕತೆಗಳು (ಭಾಗ ೧೦೯೧)- ಹಣೆಬರಹ

ಸ್ಟೇಟಸ್ ಕತೆಗಳು (ಭಾಗ ೧೦೯೧)- ಹಣೆಬರಹ

ಅವನು ವಿಪರೀತ ದೇಹ ಬಗ್ಗಿಸಿ ದುಡಿಯುತ್ತಾನೆ. ಆತನ ಶ್ರಮಕ್ಕೆ ಹಣೆಯಿಂದ ಬೆವರ ಹನಿಗಳು ನೆಲದ ಮೇಲೆ ತಟತಟನೆ ತೊಟ್ಟಿಕ್ಕುತ್ತಿದೆ. ಆತನಿಗೊಂದೇ ಆಸೆ ಮನೆಯಲ್ಲಿ ಹುಟ್ಟುವಾಗಲೇ ಕಷ್ಟ ಅನ್ನೋದು ಅವನ ಸಹೋದರನಾಗಿತ್ತು. ಮನೆಯವರೆಲ್ಲರ ನೆಂಟನಾಗಿತ್ತು. ಎಲ್ಲರೂ ಅವುಗಳ ಜೊತೆಯೇ ಬದುಕಿದವರು. ಒಂದು ಹೊತ್ತಿನ ಊಟಕ್ಕೂ ಹಿಂದೆ ಮುಂದೆ ಯೋಚಿಸುವ ದಿನಗಳು. ಸುತ್ತಮುತ್ತ ಅಂಗಡಿಗಳು ಕೈ ಬೀಸಿ ಕರೆದರೂ ಕೂಡ ಮನಸ್ಸು ನಿಗ್ರಹಿಸಿ ಮನೆಯೊಳಗೆ ಸಿಕ್ಕಿದ್ದನ್ನೇ ತಿಂದುಕೊಂಡು ದಿನ ದೂಡಿದವರು. ಬಂಧು ಬಳಗ ಗೆಳೆಯರು ಯಾವುದರ ಅರಿವೇ ಇಲ್ಲದೆ ದುಡಿಮೆಯನ್ನು ನಂಬಿದವರು. ದೇಹದಲ್ಲಿ ಒಂದಷ್ಟು ಶಕ್ತಿ ತುಂಬಿದ ದಿನದಿಂದ ಇಂದಿನವರೆಗೂ ದುಡಿಮೆ ಮಾತ್ರ ಅವರ ಹೊಟ್ಟೆಯನ್ನ ಪೊರೆಯುತ್ತಿದೆ. ಮನಸ್ಸಿನಲ್ಲಿ ಒಂದಷ್ಟು ಯೋಚನೆಗಳನ್ನು ತುಂಬಿಸಿಕೊಂಡು ಮುಂದೇನು ಅಂತ ಚಿಂತಿಸುವುದಕ್ಕೂ ಸಮಯವಿಲ್ಲದಾಗಿದೆ. ತನ್ನ ಹಣೆಯಲ್ಲಿ ಮೂಡಿದ ಬೆವರು ,ದೇಹ ಸವೆದ ಕಾರಣಕ್ಕೆ ನನ್ನ ಹಣೆಯಲ್ಲಿ ಬರೆದ ಹಣೆಬರಹ ಬದಲಾಗಬೇಕು. ನೋಡಿದವರಾಡುವ ಮಾತುಗಳೆಲ್ಲವೂ ನಿಲ್ಲಬೇಕು. ನನ್ನ ಮನೆಯ ಕಾರ್ಯಕ್ರಮ ಒಂದು ಊರಲ್ಲಿ ಸುದ್ದಿ ಆಗಬೇಕು. ನನ್ನ ಸಾವಿನ ದಿನ ಊರಿಗೆ ಪಶ್ಚಾತಾಪವಾಗಬೇಕು ಒಟ್ಟಿನಲ್ಲಿ ನಾನು ಬದುಕಬೇಕು ಅದ್ಭುತವಾಗಿ. ಅದಕ್ಕೆ ದೇಹ ಬೇಡ ಅನ್ನುವವರೆಗೂ ದುಡಿತೇನೆ ಅವನ ದೃಢ ನಿರ್ಧಾರದ ಮುಂದೆ ದೇವರು ಮೌನವಾಗಿ ಬಿಟ್ಟ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ