ಸ್ಟೇಟಸ್ ಕತೆಗಳು (ಭಾಗ ೧೦೯೨)- ಗೋಡೆ
ಆ ಮನೆಯ ಅಡಿಪಾಯ ಹಾಕುವುದಕ್ಕೆ ಊರವರು ಜೊತೆಯಾಗಿ ನಿಂತಿದ್ದರು, ಮನೆಯ ಪ್ರತೀ ಹಂತದ ಏಳಿಗೆಯಲ್ಲಿ ಊರವರ ಸಣ್ಣ ಸಣ್ಣ ಸಹಕಾರವು ಆ ಮನೆಯ ಗೋಡೆಗೆ ಅಂಗಳಕ್ಕೆ ಕಿಟಕಿ ಬಾಗಿಲುಗಳಿಗೆ ನೆನಪಿದೆ. ಮನೆಯ ಮಕ್ಕಳು ಊರು ಬಿಟ್ಟಿದ್ದಾರೆ. ಮನೆಯೊಳಗೆ ಬದುಕುತ್ತಿದ್ದ ಎರಡು ಹಿರಿ ಜೀವಗಳಿಗೆ ಇಡೀ ಊರು ತಮ್ಮ ಜೊತೆ ನಿಂತಿರುವುದು ತುಂಬಾ ಗಟ್ಟಿಯಾಗಿ ನೆನಪಿದೆ. ಆದರೆ ಇಷ್ಟು ದಿನದವರೆಗೂ ಅವರ ಮನೆಯ ಪಕ್ಕದಲ್ಲಿರುವ ಅವರದೇ ಸ್ಥಳದಿಂದ ಹಲವಾರು ಮನೆಗಳಿಗೆ ದೊಡ್ಡ ವಾಹನ ಚಲಿಸುವುದಕ್ಕೆ ರಸ್ತೆ ಬೇಕಿತ್ತು. ಆ ರಸ್ತೆಯು ಹಿಂದಿನಿಂದ ಬಳಕೆಯು ಆಗ್ತಾ ಇತ್ತು. ಅದು ಯಾವಾ ಗಾಳಿ ಬೀಸಿತೋ ಗೊತ್ತಿಲ್ಲ, ಏಕಾಏಕಿ ಮನೆಯ ಮುಂದಿನ ಆ ರಸ್ತೆಗೆ ತಡೆಗೋಡೆಯಾಗಿ ಬೇಲಿ ಕಟ್ಟಿದ್ರು. ಊರವರೆಲ್ಲ ಬಂದು ಸೇರಿ ಮಾತಿಗೆ ಮಾತು ಬೆಳೆಸಿ ಬೇಲಿಯನ್ನು ತೆಗೆಯಬೇಕೆಂದು ಬೇಡಿಕೊಂಡರೂ ಕೂಡ ದಿನ ಕಳೆಯುವುದರ ಒಳಗೆ ದೊಡ್ಡ ಇಟ್ಟಿಗೆಯ ಗೋಡೆ ನಿರ್ಮಾಣ ಆಗಿ ಹೋಯಿತು. ಊರಿಗೆ ಎಲ್ಲ ಕೆಲಸಗಳಿಗೆ ತುಂಬಾ ಮುಖ್ಯವಾಗಿದ್ದ ರಸ್ತೆಯೊಂದು ಮುಚ್ಚಿ ಹೋಗಿತ್ತು. ಇಡೀ ಊರಿನ ಸಹಾಯವನ್ನ ಆ ಮನೆ ಮರೆತು ಹೋಗಿತ್ತು. ಊರು ಕಾಯ್ತಾ ಇದೆ, ಕಾಲಚಕ್ರ ಒಂದಲ್ಲ ಒಂದು ದಿನ ಇರುತ್ತದೆ. ಅದೇ ಗೋಡೆ ಮತ್ತೊಂದಿನ ಒಡೆದು ಊರನ್ನ ಜೊತೆ ಮಾಡುತ್ತದೆ. ಕಟ್ಟಿದ ಒಂದು ಗೋಡೆಯಿಂದ ತೊಂದರೆಗೊಳಗಾದ ಹಲವು ಕುಟುಂಬಗಳ ಪ್ರಶ್ನೆಗೆ ಉತ್ತರವು ಸಿಗುತ್ತದೆ. ಹಾಗಾಗಿ ಒಳಗೊಳಗೆ ಕುದಿಯುತ್ತಾ ಊರು ಸದ್ಯಕ್ಕೆ ಮೌನವಾಗಿದೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ