ಸ್ಟೇಟಸ್ ಕತೆಗಳು (ಭಾಗ ೧೦೯೩)- ಕನಸವಳು
ಅವಳ ಆಸೆಗಳ ಪಟ್ಟಿ ದೊಡ್ಡದೇನಿಲ್ಲ. ಆಗಸದಲ್ಲಿರುವ ಬಿಳಿಯ ಮೋಡವನ್ನು ಐಸ್ ಕ್ರೀಮ್ ಅಂತ ಅಂದುಕೊಂಡು ಅದನ್ನು ಪುಟ್ಟ ಕೈಯಲ್ಲಿ ಹಿಡಿದು ಅದಕ್ಕೊಂದು ಕೋಲನ್ನು ಕಟ್ಟಿ ಹಾಗೆ ತಿನ್ನಬೇಕೆನ್ನುವ ಆಸೆ, ಮುಗಿಲೆತ್ತರದಲ್ಲಿ ಹಾರುತ್ತಿರುವ ಹಕ್ಕಿಗಳೆಲ್ಲವೂ ಅಂಗಳಕ್ಕೆ ಇಳಿದು ಇವಳನ್ನ ಜೊತೆಗೆ ಹೊತ್ತುಕೊಂಡು ಇಡೀ ಊರು ತಿರುಗಿಸಿ ಮತ್ತೆ ಇವರ ಮನೆಯ ಅಂಗಳಕ್ಕೆ ಬಿಟ್ಟ ಬಿಟ್ಟುಬಿಡಬೇಕೆನ್ನುವ ಆಸೆ, ಚಂದಿರನ ಸುತ್ತ ರಾತ್ರಿಯಾದಾಗ ಕಪ್ಪು ಮೋಡಗಳು ಕಣ್ಣಮುಚ್ಚಾಲೆ ಆಡೋದನ್ನ ಕಂಡು ತಾನು ಅವುಗಳ ಜೊತೆ ಸೇರಿ ಕಣ್ಣ ಮುಚ್ಚಾಲೆಯಾಡಿ,ಮಿನುಗುವ ನಕ್ಷತ್ರಗಳ ಜೊತೆ ಜೋಕಾಲಿ ಆಡಬೇಕೆನ್ನುವ ಆಸೆ, ಕಾಡಿನಲ್ಲಿ ಹರಿಯುವ ಜುಳು ಜುಳು ನಿನಾದವನ್ನು ಕೇಳಿ ತಾನು ಆ ನದಿ ಹರಿಯುವ ಎಲ್ಲ ಜಾಗದಲ್ಲೂ ಸುತ್ತಾಡಬೇಕೆನ್ನುವ ಆಸೆ, ಮನೆಯಂಗಳದಲ್ಲಿ ಓಡುತ್ತಿರುವ ಪುಟ್ಟ ಕೋಳಿ ಮರಿಗಳನ್ನು ಕಂಡು ತಾನು ಅವುಗಳೊಂದಿಗೆ ಅಲ್ಲಲ್ಲಿ ಕಾಳು ಹೆಕ್ಕುತ್ತಾ ಮಾತನಾಡುತ್ತಾ ಆಟವಾಡಬೇಕೆಂದು ಆಸೆ, ಪುಟ್ಟ ನಾಯಿ ಮರೆಯಾಗಿಯೋ, ಪುಟ್ಟ ಕಣ್ಣುಗಳಿಂದ ನೋಡುವ ಮೀನು ಮರಿಯಾಗಿಯೋ, ಬೆಕ್ಕಿನ ಮರಿಯಾಗಿಯೋ ಹೀಗೆ ಅವಳೆಲ್ಲ ಕನಸುಗಳು ಪ್ರಕೃತಿಯ ನಡುವೆ ನಡೆದಿತ್ತು. ಹಾಗೆಯೇ ದೊಡ್ಡವಳಾದ ಹಾಗೆ ಕನಸುಗಳು ಹಾಗೆ ಉಳಿದಿತ್ತು. ವಾಸ್ತವಿಕತೆ ಅರ್ಥವಾಗಿತ್ತು ,ಆದರೂ ಆ ಪರಿಸರವನ್ನು ಉಳಿಸಬೇಕು ಅನ್ನುವ ನಿಟ್ಟಿನಲ್ಲಿ ಮನೆಯ ಸುತ್ತ ಸಾಧ್ಯವಾದಷ್ಟು ಗಿಡ ನೆಟ್ಟಿದ್ದಾಳೆ, ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದಾಳೆ ,ಎಲ್ಲಾ ಕಡೆ ಪ್ರೀತಿ ಹಂಚಿದ್ದಾಳೆ, ತಪ್ಪು ಮಾಡುವವರಿಗೆ ತಿದ್ದಿ ಹೇಳುತ್ತಾಳೆ, ಅಂದಿನ ಕನಸೆಲ್ಲವನ್ನ ನನಸು ಮಾಡುವುದಕ್ಕೆ ಸಾಧ್ಯವಿಲ್ಲದಿದ್ದರೂ ಅವೆಲ್ಲವೂ ತನ್ನ ಮುಂದಿನವರಿಗೆ ಉಳಿಸಬೇಕೆಂಬ ಯೋಚನೆಯೊಂದು ಅವಳಲ್ಲಿದೆ. ಅಂತಹದೇ ಕನಸು ನಮಗೂ ಬಿದ್ರೆ ನಾವು ಅವಳಂತಾದರೆ ಎಲ್ಲ ಪ್ರಕೃತಿ ಹಾಗೆ ಉಳಿದು ಬಿಡಬಹುದು ಅಲ್ವಾ..?.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ