ಸ್ಟೇಟಸ್ ಕತೆಗಳು (ಭಾಗ ೧೦೯೯)- ಸಂಬಂಧ

ಸ್ಟೇಟಸ್ ಕತೆಗಳು (ಭಾಗ ೧೦೯೯)- ಸಂಬಂಧ

ಸಂಬಂಧಗಳನ್ನು ಉಳಿಸಿಕೊಳ್ಳಬೇಕು, ಅದು ಮಾತ್ರ ನಮ್ಮನ್ನ ಹೆಚ್ಚು ದೂರದವರೆಗೆ ತಲುಪುವುದಕ್ಕೆ ಸಹಾಯ ಮಾಡುತ್ತದೆ, ಬದುಕಿನಲ್ಲಿ ಹೊಸತನವನ್ನು ತೋರಿಸುತ್ತದೆ. ನಾವೇನು ಅಂತ ಜಗತ್ತಿಗೆ ಪರಿಚಯವಾಗುವುದಕ್ಕೆ ಸಂಬಂದಗಳು ಮಾತ್ರ ಸಹಾಯ ಮಾಡುತ್ತವೆ. ಮತ್ತೇನು ಇಲ್ಲ ನಿನ್ನ ಸುತ್ತಮುತ್ತ ನಿನ್ನ ಜೊತೆಗೆ ನಿಂತವರನ್ನ ನೆನಪಿಟ್ಟುಕೋ. ಆಗಾಗ ವಿಚಾರಿಸುತ್ತಿರು ಇಷ್ಟು ಮಾಡಿದರೆ ಬದುಕು ಅದ್ಭುತವಾಗಿರುತ್ತೆ ಹೀಗೆ ಅವಳು ಮನೆ ಬಿಟ್ಟು ದೂರದೂರಿಗೆ ಕೆಲಸಕ್ಕೆ ಹೊರಟಾಗ ಮನೆಯಲ್ಲಿ ಅಮ್ಮ ಹೇಳಿ ಕಳಿಸಿದ್ರು. ಆ ಮಾತನ್ನು ಆಗಾಗ ನೆನಪಿಸುತ್ತಾ ಅವಳು ಬದುಕಿದ್ದಳು. ವರ್ಷ 25 ದಾಟಿದ ನಂತರ ಯಾವುದೋ ಒಂದು ಕಾರ್ಯಕ್ರಮಕ್ಕೆ ಅತಥಿಗಳ ಪಟ್ಟಿ ತಯಾರಿ ಮಾಡುವಾಗ ಒಬ್ಬರು ಅದ್ಭುತ ವ್ಯಕ್ತಿತ್ವದ ವ್ಯಕ್ತಿಯನ್ನು ವೇದಿಕೆ ಮೇಲೆ ಕರೆಸುವ ಮಾತಾಯಿತು. ಆಕೆಯ ಮೇಲೆ ಜವಾಬ್ದಾರಿಯನ್ನು ನೀಡಿದ್ರು. ಆಕೆ ಸಂಬಂಧಗಳನ್ನು ಉಳಿಸಿಕೊಂಡಿದ್ದಳು. 25 ವರ್ಷಗಳ ಹಿಂದೆ ಸಣ್ಣದಾಗಿ ಟೈಲರಿಂಗ್ ಕಲಿಕೆಯಲ್ಲಿ ಜೊತೆಯಾಗಿದ್ದ ಗೆಳತಿಗೆ ಕರೆ ಮಾಡಿದ್ಲು. ಆ ಗೆಳತಿ ಇಂದಿಗೆ ನಾಡು ಕಂಡ ಪ್ರಸಿದ್ಧ ಲೇಖಕಿಯಾಗಿದ್ದಳು. ಗೆಳತಿಯರಿಬ್ಬರ ಸಂಬಂಧ ಹಾಗೆ ಉಳಿದಿತ್ತು. ಆ ಕಾರಣಕ್ಕೆ ಪ್ರೀತಿಯಿಂದ ಒಪ್ಪಿ ವೇದಿಕೆ ಕಾರ್ಯಕ್ರಮದಲ್ಲಿ ಬಂದು ಮೆರುಗು ಹೆಚ್ಚಿಸಿದಳು. ಅವರು ಅಂದು ಬಟ್ಟೆ ಹೊಲಿಯುತ್ತಿದ್ದರು, ಇಂದು ಅಕ್ಷರ ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಅವತ್ತು ಅಮ್ಮ ಹೇಳಿದ ಮಾತು ಅವಳಿಗೆ ನೆನಪಾಯಿತು ಸಂಬಂಧಗಳು ನಮ್ಮನ್ನ ತುಂಬ ದೂರದವರೆಗೆ ಕೊಂಡು ಹೋಗುತ್ತದೆ ಅಂತ... ಅರಿವಾಗುವುದ್ದಕ್ಕೆ ವರ್ಷ ಇಪ್ಪತ್ತೈದು ಬೇಕಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ